ದೀಪಾವಳಿ ಮೊದಲ ದಿನವೇ ಬೆಂಗಳೂರಿನ ಹಲವೆಡೆ ಪಟಾಕಿ ಸಿಡಿತದಿಂದ ಮಕ್ಕಳು ಗಾಯಗೊಂಡಿರುವ ಪ್ರಕರಣಗಳು ಪತ್ತೆ ಆಗಿವೆ. ಈವರೆಗೂ ನಗರದ ಪ್ರತ್ಯೇಕ ಆಸ್ಪತ್ರೆಗಳಲ್ಲಿ 32 ಪಟಾಕಿ ಸಿಡಿತ ಪ್ರಕರಣ ದಾಖಲಾಗಿದ್ದು, ನಾರಾಯಣ ನೇತ್ರಾಲಯದಲ್ಲಿ 20 ಪ್ರಕರಣ ದಾಖಲಾಗಿವೆ. ಇದರಲ್ಲಿ 13 ಬಾಲಕರಿಗೆ ಪಟಾಕಿ ಗಾಯಗಳಾಗಿವೆ, 7 ಮಂದಿ ವಯಸ್ಕ ಮಹಿಳೆಯರಿಗೆ ಪಟಾಕಿ ಸಿಡಿತವಾಗಿದೆ. 20 ಜನರಲ್ಲಿ 17 ಮಂದಿ ಪಟಾಕಿ ಸಿಡಿಸಲು ಹೋಗಿ ಗಾಯ ಮಾಡಿಕೊಂಡಿದ್ದಾರೆ. 3 ಮಂದಿ ಪಟಾಕಿ ಸಿಡಿಸುವಾಗ ನೋಡುತ್ತಾ ನಿಂತಿದ್ದಾಗ ಗಾಯಗಳಾಗಿವೆ.
ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ 9 ಕೇಸ್, ಶಂಕರ್ ಐ ಆಸ್ಪತ್ರೆಯಲ್ಲಿ 2 ಕೇಸ್, ಪ್ರಭಾ ಕಣ್ಣಿನ ಆಸ್ಪತ್ರೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಗಾಯಾಳುಗಳು ಎಮರ್ಜೆನ್ಸಿ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟಾಕಿ ಸಿಡಿಸುವಾಗ ಎಚ್ಚರಿಕೆ ವಹಿಸುವಂತೆ ವೈದ್ಯರು ಮನವಿ ಮಾಡಿಕೊಂಡಿದ್ದಾರೆ. ಕಣ್ಣಿಗೆ ಏನಾದರೂ ತೊಂದರೆಯಾದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ, ಕಣ್ಣನ್ನು ಯಾವುದೇ ಕಾರಣಕ್ಕೂ ಉಜ್ಜುವುದಕ್ಕೆ ಹೋಗಬೇಡಿ. ಕೇವಲ ತಣ್ಣೀರಿನಿಂದ ಕಣ್ಣನ್ನು ತೊಳೆದುಕೊಂಡು ಕೂಡಲೇ ಆಸ್ಪತ್ರೆಗೆ ಬಂದರೆ ನಿಮ್ಮ ದೃಷ್ಟಿ ಉಳಿಸಿಕೊಳ್ಳಬಹುದು. ಪಟಾಕಿ ವಿಚಾರದಲ್ಲಿ ಎಚ್ಚರವಾಗಿರಿ ಎಂದು ಮಿಂಟೋ ಆಸ್ಪತ್ರೆ ವೈದ್ಯೆ ಡಾ. ಹೇಮಲತಾ ಮನವಿ ಮಾಡಿದ್ದಾರೆ.

ಕಲಬುರಗಿ ಜಿಲ್ಲೆ ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಟಾಕಿ ಅಂತಾ ತಿಳಿದು ಮದ್ದಿಗೆ ಬೆಂಕಿ ಇಟ್ಟಿದ್ದು ಕೂಡಲೇ ಸ್ಫೋಟ ಸಂಭವಿಸಿದೆ. ಸ್ಫೋಟದಿಂದಾಗಿ ಬಾಲಕನ ತಲೆ ಛಿದ್ರ ಛಿದ್ರವಾಗಿದೆ. ಸೇಡಂ ತಾಲ್ಲೂಕಿನ ಹಂದರಕಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮದ್ದು ಸಿಡಿದು ಬಾಲಕ ಭೀಮರಾಯ ಸಾವನ್ನಪ್ಪಿದ್ದಾನೆ. ಕಾಡುಹಂದಿ ಓಡಿಸಲು ಮನೆಯಲ್ಲಿ ತಂದಿಟ್ಟಿದ್ದ ಮದ್ದನ್ನು ದೀಪಾವಳಿ ಪಟಾಕಿ ಎಂದು ತಪ್ಪಾಗಿ ತಿಳಿದು ಭೀಮರಾಯ ಬೆಂಕಿ ಹಚ್ಚಿದ್ದಾನೆ. ಇದರಿಂದ ಪ್ರಾಣ ಹಾನಿಯೇ ಆಗಿದೆ. ಬೆಂಕಿ ಹಚ್ಚಿದ ಕ್ಷಣಾರ್ಧದಲ್ಲಿ ದೊಡ್ಡದಾಗಿ ಸ್ಫೋಟ ಸಂಭವಿಸಿದೆ ಬಾಲಕನ ತಲೆ ಛಿದ್ರ ಛಿದ್ರ ಆಗಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ದೀಪಾವಳಿ ಹಬ್ಬದ ಆಚರಣೆ ಜೋರಾಗಿದೆ. ಮನೆಗಳ ಮುಂದೆ ಆಕಾಶಬುಟ್ಟಿ, ವರ್ಣ ರಂಜಿತ ಲೈಟ್ಸ್ಗಳನ್ನ ಹಾಕಿದ್ದು, ಬೀದಿ ದೀಪಗಳು ಝಗಮಗಿಸುತ್ತಿದೆ. ಅಮಾವಾಸ್ಯೆ ದಿನದಂದು ಹಲವಾರು ಜನ ಪೂಜೆ ನೆರವೇರಿಸಿದ್ದಾರೆ. ಇಂದು ಬಲಿಪಾಡ್ಯವಾಗಿದ್ದು, ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳ ಖರೀದಿ ಭರಾಟೆ ಜೋರಾಗಿದೆ. ಆದರೆ ಮಂಡ್ಯ ಜಿಲ್ಲೆ ಮೇಲುಕೋಟೆಯಲ್ಲಿ ದೀಪಾವಳಿ ಹಬ್ಬದ ಬದಲು ಕರಾಳ ದಿನವನ್ನ ಆಚರಿಸಿದ್ದಾರೆ. ಟಿಪ್ಪು ಸುಲ್ತಾನ ನರಮೇಧ ಖಂಡಿಸಿ ಕರಾಳ ದಿನವನ್ನ ಆಚರಿಸಿದ್ದಾರೆ. ದೀಪಾವಳಿಯಂದೇ ಸುಮಾರು 700ಕ್ಕೂ ಹೆಚ್ಚು ಜನರನ್ನು ಮೇಲುಕೋಟೆ ಹತ್ಯೆ ಮಾಡಲಾಗಿತ್ತು ಎನ್ನಲಾಗಿದ್ದು, ಇದನ್ನು ಖಂಡಿಸಿ ಬಿಜೆಪಿ ಮತ್ತು ಹಿಂದೂಪರ ಕಾರ್ಯಕರ್ತರು ಕರಾಳ ದಿನವನ್ನ ಆಚರಿಸಿದ್ದಾರೆ. ಪಂಜಿನ ಮೆರವಣಿಗೆ ಮಾಡಿದ್ದಾರೆ.


