The Public Spot
ರಾಜ್ಯ

ಹೊಸ ಕಾನೂನು ಜಾರಿಗಾಗಿ ಪ್ರಾಣವನ್ನೇ ಕೊಟ್ಟಳಾ ಈ ಹೆಣ್ಣು ಮಗಳು..?

ಪ್ರೀ ವೆಡ್ಡಿಂಗ್ ಫೋಟೋಶೂಟ್ ಅನ್ನೋದು ಟ್ರೆಂಡ್‌ ಆಗಿದೆ. ಮದುವೆಗೂ ಮುನ್ನ ಫೋಟೋಶೂಟ್​ ಮಾಡಿಸದಿದ್ರೆ ಮದುವೆ ಆಗೋದಿಲ್ಲ ಅನ್ನೋ ಮಟ್ಟಕ್ಕೆ ಪ್ರೀ ವೆಡ್ಡಿಂಗ್‌ ಶೂಟ್‌ ಬಂದು ನಿಂತಿದೆ. ಆದರೆ ಅದಕ್ಕೆ ಯಾವುದೇ ನೀತಿ ನಿಯಮ ಅನ್ನೋದೇ ಇಲ್ಲ. ರಸ್ತೆ ಆದ್ರೂನು ಸರಿ.. ನದಿ, ತೊರೆ, ಸಮುದ್ರ ಏನು ಆದರೂ ಸರಿ. ಹುಡುಗ ಹುಡುಗಿ ತಬ್ಬಿಕೊಂಡು ನಿಂತ್ರೆ ಕ್ಯಾಮೆರಾ ಮನ್​ ಆ್ಯಂಗಲ್​ ಬೈ ಆ್ಯಂಗಲ್​ ಫೋಟೋ ತೆಗೆಯುತ್ತಾರೆ. ಇದರಲ್ಲಿ ಆ ಯುವ ಜೋಡಿಯ ಸಂಭ್ರಮ ಇರುತ್ತದೆ ಅನ್ನೋದು ಸರಿ. ಆದರೆ ಈ ಫೋಟೋ ಶೂಟ್​ಗೆ ಒಂದು ನೀತಿ ನಿಯಮ ಅನ್ನೋದು ಇರ್ಬೇಕು. ಎಲ್ಲೆಂದ್ರಲ್ಲಿ ಫೋಟೋ ಶೂಟ್​ ಮಾಡಿದ್ರೆ ಈ ರೀತಿಯಲ್ಲೂ ಆಗಬಹುದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.

ಮೈಸೂರಿನ ಅರಮನೆ ಸುತ್ತಾಮುತ್ತಾ ಜೋಡಿಹಕ್ಕಿಗಳ ಕಲರವ ಕಣ್ಣಿಗೆ ಕಾಣಿಸುತ್ತದೆ. ಸೂರ್ಯೋದಯದಿಂದ ಶುರುವಾಗಿ ಸೂರ್ಯ ಪಶ್ಚಿಮದಲ್ಲಿ ಅಸ್ತಂಗತ ಆಗುವ ಸಮಯದ ತನಕವೂ ಕ್ಯಾಮೆರಾಗೆ ಫೋಸ್‌ ಕೊಡೋ ಯುವ ಜೋಡಿಗಳಿಗೆ ಕೊರತೆ ಇರೋದಿಲ್ಲ. ನಿನ್ನೆ ಕೂಡ ಅರಮನೆ ಮುಂಭಾಗ ಪ್ರೀ ವೆಡ್ಡಿಂಗ್​ ಶೂಟ್ ನಡೀತಿತ್ತು. ಇದಕ್ಕಾಗಿ ರಸ್ತೆಯಲ್ಲಿ ಬ್ಯಾರಿಕೇಡ್‌ ಅಡ್ಡಲಾಗಿ ಇಟ್ಕೊಂಡು ಕ್ಯಾಮೆರಾಗೆ ಪೋಸ್‌ ಕೊಡ್ತಿದ್ರು. ಬೈಕ್​ನಲ್ಲಿ ಹೋಗ್ತಿದ್ದ ತಾತಾ ಮೊಮ್ಮಗಳಿಗೆ ನಿನಗೂ ಹೀಗೆ ಫೋಟೋ ಶೂಟ್​ ಮಾಡುಸ್ತೀನಿ ಅಂತಾ ಹೇಳುತ್ತಾ ಹೋಗ್ತಿದ್ರೋ ಏನೋ..! ಅರೆಕ್ಷಣ ಕಣ್ಮಿಟುಕಿಸಿ ಬಿಡೋ ಅಷ್ಟರಲ್ಲಿ ರಸ್ತೆಗೆ ಅಡ್ಡಲಾಗಿ ಇಟ್ಟಿದ್ದ ಬ್ಯಾರಿಕೇಡ್​ಗೆ ಡಿಕ್ಕಿ ಹೊಡೆದು ತಾತಾ ಹಾಗೂ ಮೊಮ್ಮಗಳು ನೆಲಕ್ಕೆ ಬಿದ್ದಿದ್ರು. ಹಿಂದಿನಿಂದ KSRTC ಬಸ್ ಇಬ್ಬರ ಮೇಲೂ ಹತ್ತಿ ಮುಂದಕ್ಕೆ ಹೋಗಿ ನಿಂತಿತ್ತು.

ತಾತಾ ವೆಂಕಟೇಶ್ ಜೊತೆಗೆ ಹೊರಟಿದ್ದ ಮೊಮ್ಮಗಳು ವೈಷ್ಣವಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಆದರೆ ಫೋಟೋ ಶೂಟ್ ಮಾಡೋಕೆ ಯಾರು ಪರ್ಮಿಷನ್​ ಕೊಟ್ಟವರು..? ಬ್ಯಾರಿಕೇಡ್​ ರಸ್ತೆಗೆ ಅಡ್ಡಲಾಗಿ ಇಟ್ಟಿದ್ದು ಯಾರು..? ಪೊಲೀಸರ ಅನುಮತಿ ಪಡೆದುಕೊಂಡಿದ್ರಾ..? ಅಥವಾ ಪಾಲಿಕೆಯಿಂದ ಅನುಮತಿ ಪಡೆದಿದ್ದಾರಾ..? ಎಲ್ಲಿಯೂ ಅನುಮತಿ ಪಡೆದಿಲ್ಲ ಅಂದ ಮೇಲೆ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್​ ಇಟ್ಟಿದ್ದು ತಪ್ಪಲ್ಲವೇ..? ಸಾರ್ವಜನಿಕರಿಗೆ ಸಮಸ್ಯೆ ಆಗುವಂತಾ ಫೋಟೋ ಶೂಟ್​ ಅಗತ್ಯ ಇದೆಯಾ..? ಬ್ಯಾರಿಕೇಡ್‌ಗೆ ಬೈಕ್​​ ಡಿಕ್ಕಿ ಹೊಡೆದಿದ್ದು ವೆಂಕಟೇಶ್​ ತಪ್ಪು ಹೌದು. ಆದರೆ ಫೋಟೋ ಶೂಟ್​ ಅಲ್ಲಿ ನಡೆಯದಿದ್ದರೆ..! ಬ್ಯಾರಿಕೇಡ್​ ಅಡ್ಡ ಇರದಿದ್ದರೆ..! ತಾತಾ ಹಾಗೂ ಮೊಮ್ಮಗಳು ಇಬ್ಬರೂ ನೆಲಕ್ಕೆ ಬೀಳುತ್ತಿರಲಿಲ್ಲ. ಹಿಂದಿನಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಇಬ್ಬರ ಮೇಲೂ ಹರಿಯುತ್ತಿರಲಿಲ್ಲ. ವೈಷ್ಣವಿ ಸ್ಥಳದಲ್ಲೇ ಪ್ರಾಣ ಬಿಡುತ್ತಿರಲಿಲ್ಲ. ಮೈಸೂರಿನ ನಿವಾಸಿ ವೆಂಕಟೇಶ್‌ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುವ ಪ್ರಮೇಯ ಬರುತ್ತಿರಲಿಲ್ಲ.

ಈ ಪ್ರಕರಣದಲ್ಲಿ ಒಬ್ಬರದ್ದೇ ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ರಸ್ತೆಯಲ್ಲಿ ಬ್ಯಾರಿಕೇಡ್​ ಇಟ್ಟು ಫೋಟೋ ಶೂಟ್ ಮಾಡ್ತಿದ್ದೂ ತಪ್ಪೇ.. ಅದೇ ರೀತಿ ಮೊಮ್ಮಗಳನ್ನು ಬೈಕ್​ನಲ್ಲಿ ಕರೆದೊಯ್ಯುತ್ತಿದ್ದ ವೆಂಕಟೇಶ್​ ಬ್ಯಾರಿಕೇಡ್​ ಗಮನಿಸದೆ ಫೋಟೋಶೂಟ್​ ನೋಡಿಕೊಂಡು ಅಪಘಾತ ಮಾಡಿದ್ದೂ ತಪ್ಪೆ. ಇನ್ನು ಹಿಂದೆ ಬರ್ತಿದ್ದ KSRTC ಬಸ್​ ಚಾಲಕ ಕೂಡ ಬಸ್​ ನಿಯಂತ್ರಣ ಮಾಡದೆ ಬಸ್​ ಹತ್ತಿಸಿದ್ದೂ ತಪ್ಪೆ. ಆದರೆ ಎಲ್ಲದ್ದಕ್ಕೂ ಮೂಲ ಕಾರಣ ಅಂದ್ರೆ ಬ್ಯಾರಿಕೇಡ್​ ಅಡ್ಡಲಾಗಿ ಇಟ್ಟಿದ್ದು. ಹೀಗಾಗಿ ಜನರು ಅರಮನೆ ಬಳಿ ಫೋಟೋ ಶೂಟ್​ ರದ್ದು ಮಾಡಬೇಕು ಅಂತಾ ಒತ್ತಾಯ ಮಾಡಿದ್ದಾರೆ. ರಸ್ತೆ ರಸ್ತೆಯಲ್ಲಿ ಕ್ಯಾಮೆರಾ ಹಿಡಿದು ಓಡಾಡೋದನ್ನು ತಪ್ಪಿ ಅಂತಾ ಜನರು ಆಗ್ರಹ ಮಾಡಿದ್ದಾರೆ.

ಫೋಟೋ ಶೂಟ್​ ನಿಷೇಧ ಮಾಡೋದಕ್ಕೆ ಸಾಧ್ಯವಿಲ್ಲ. ಆದರೆ ಅರಮನೆ ಸುತ್ತಮುತ್ತ ಹಾಗೂ ನಗರ ಪ್ರದೇಶಗಳಲ್ಲಿ ಫೋಟೋ ಶೂಟ್​ ಮಾಡುವುದಕ್ಕೆ ಇಂತಿಷ್ಟು ಹಣ ಪಾವತಿ ಮಾಡಬೇಕು. ಪೊಲೀಸ್​ ಇಲಾಖೆಯಿಂದ ಅನುಮತಿ ಪಡೆಯಬೇಕು. ಸ್ಥಳೀಯ ಆಡಳಿತದಿಂದ NOC ಪಡೆಯಬೇಕು ಎಂದು ಸರ್ಕಾರ ನೀತಿ ನಿಯಮ ಮಾಡಬೇಕು. ಅದರಿಂದ ಸರ್ಕಾರಕ್ಕೆ ಒಂದಿಷ್ಟು ಆದಾಯವೂ ಬರುತ್ತದೆ. ಜೊತೆಗೆ ಬೇಕಾಬಿಟ್ಟಿಯಾಗಿ ಕಂಡಕಂಡಲ್ಲಿ ಫೋಟೋ ಶೂಟ್​ ಮಾಡುವುದನ್ನು ತಡೆಗಟ್ಟಬಹುದು. ವೈಷ್ಣವಿ ಸಾವಿನಿಂದ ಆದರೂ ಸರ್ಕಾರ ನೂತನ ಕಾನೂನು ಜಾರಿಗೆ ಮನಸ್ಸು ಮಾಡಬೇಕು. ಮೊಬೈಲ್​ಗಳಲ್ಲಿ ಫೋಟೋ ತೆಗೆಯುವುದನ್ನು ತಡೆಯೋದಕ್ಕೆ ಸಾಧ್ಯವಿಲ್ಲ. ಆದರೆ ಕ್ಯಾಮೆರಾಮನ್​ ಬಳಸಿ ಮದುವೆ ಫೋಟೋಶೂಟ್​ಗಳಿಗೆ ಒಂದು ಕಾನೂನು ಅಗತ್ಯವಿದೆ ಅನ್ನೋದನ್ನು ಈ ಪ್ರಕರಣ ಸಾರಿ ಸಾರಿ ಹೇಳ್ತಿದೆ. ​

Related posts

ಜಾತಿ ಜನಗಣತಿ ಆರಂಭ.. ಇವತ್ತು ಹೈಕೋರ್ಟ್‌ನಲ್ಲಿ ಸಿಗುತ್ತಾ ಮಧ್ಯಂತರ ತಡೆ..?

Publicspot

JDS ಪಾಲಿಗೆ GT ದೇವೇಗೌಡರದ್ದೇ ಚಿಂತೆ.. ಅತ್ಮ ಸಾಕ್ಷಿ ಅಂದ್ರೆ ಏನು..?

Publicspot

ಸ್ವಂತ ಜಮೀನಲ್ಲಿ ನಿಧಿ ಸಿಕ್ಕರೂ ಸರ್ಕಾರಕ್ಕೆ ಸೇರುತ್ತಾ..? ಕಾರಣವೇನು..?

Publicspot

ರಾಜ್ಯದಲ್ಲಿ ಇನ್ನೂ 6 ದಿನ ಭಾರೀ ಮಳೆ.. ಮಳೆಯಿಂದ ಜೀವಹಾನಿ

Publicspot

Namma Metro ಹಳದಿ ಮಾರ್ಗದಲ್ಲಿ ಮಹಾನ್​ ಎಡವಟ್ಟು.. ಜನರೆಲ್ಲಾ ಕಂಗಾಲು..

Publicspot

ಚಾಮರಾಜನಗರದಲ್ಲಿ ಪ್ರಾಣಿ ಕೊಂದಿದ್ದಕ್ಕೆ ಮೂವರ ಹತ್ಯೆ..! ಇದ್ಯಾವ ಕಾನೂನು..?

Publicspot