ಭಾರತ ಶೇಕಡ 60 ರಿಂದ ಶೇಕಡ 70 ರಷ್ಟು ಭೂ ಭಾಗ ಹಳ್ಳಿಗಳಿಂದಲೇ ಆವೃತ ಆಗಿದೆ. ಹಳ್ಳಿಯಲ್ಲಿ ಇರುವ ಒಬ್ಬ ಸಣ್ಣ ರೈತನೂ ಕೂಡ ದಿಲ್ಲಿಯಲ್ಲಿ ಆಗ್ತಿರೋ ಬೆಳವಣಿಗೆಯನ್ನು ತನ್ನ ಬೆರಳ ತುದಿಯಲ್ಲಿ ನೋಡಿ ಮೊಖಕ್ಕೆ ಉಗಿಯುವಷ್ಟು ತಿಳುವಳಿಕೆ ಪಡೆದಿದ್ದಾನೆ. ಹಳ್ಳಿಗಳಲ್ಲಿ ವಾಸ ಮಾಡುವ ಜನರು ಕೇವಲ ಯಾರೋ ರಾಜಕಾರಣಿಗಳು ಹೇಳಿದ್ದನ್ನು ಮಾತ್ರ ಕೇಳೋದಿಲ್ಲ. ಆತನಿಗೂ ಒಳ್ಳೇದು ಯಾವುದು..? ಕೆಟ್ಟದ್ದು ಯಾವುದು ಅನ್ನೋದನ್ನು ಪರಾಮರ್ಶೆ ಮಾಡುವ ಚಾಕಚಕ್ಯತೆಯೂ ಇದೆ. ಆದರೆ ಕೆಲವೊಂದು ಕಾರಣಗಳಿಗಾಗಿ, ಮೂರ್ಖ ರಾಜಕಾರಣಿಗಳನ್ನು ಬೆಂಬಲಿಸುತ್ತಾನೆ ಅಷ್ಟೆ.

ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಹಳ್ಳಿ ಗುಗ್ಗು ಎಂದಿದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಜೆಡಿಎಸ್ ಕೌಂಟರ್ ಅಟ್ಯಾಕ್ ಮಾಡಿದೆ. ನಾವು ಹಳ್ಳಿ ಗುಗ್ಗುಗಳೇ ಏನಿವಾಗ..? ಎಂದು ಜೆಡಿಎಸ್ ಶಾಸಕರು ಪೋಸ್ಟರ್ ಹಾಕಿಕೊಂಡಿದ್ದಾರೆ. ಕುಮಾರಸ್ವಾಮಿ ಮಾತನಾಡಿ ಹಳ್ಳಿಯ ಜನರನ್ನು ಗುಗ್ಗುಗಳು ಎಂದಿರುವ ಕಾಂಗ್ರೆಸ್ಗೆ ಸರ್ವನಾಶ ಆಗುವ ಕಾಲುವ ಸನಿಹದಲ್ಲೇ ಇದೆ. ರಾಹುಲ್ ಗಾಂಧಿಯನ್ನು ಈಡಿಯೆಟ್ ಎಂದು ಕರೆಯುವುದು ಉಂಟು. ಆದರೆ ನೀವು ಹಳ್ಳಿಯ ಜನರನ್ನು ಈಡಿಯೆಟ್ ಎಂದಿದ್ದಿದ್ದೀರಿ. ಸಮಯ ಬಂದಾಗ ಯಾರು ಈಡಿಯೇಟ್ ಎನ್ನುವುದನ್ನು ಜನರು ಅರ್ಥ ಮಾಡಿಸ್ತಾರೆ ಎಂದಿದ್ದಾರೆ.
ನಾವು ಹಳ್ಳಿಯವರೇ ಎಂಬ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟಿದ್ದಾರೆ. ಭಾರತದ ಆತ್ಮ ಹಳ್ಳಿಗಳಲ್ಲಿದೆ. ನಿಮ್ಮ ಆತ್ಮ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿದೆ. ಹಳ್ಳಿಗರಾಗುವುದು ಹೆಮ್ಮೆಯ ವಿಚಾರ. ಆದರೆ ನೀವು ಗುಗ್ಗುತನದ ಪ್ರದರ್ಶನ ಮಾಡಬೇಡಿ. ಎನ್ನುವುದಷ್ಟೆ ನನ್ನ ಕಳಕಳಿ ಮತ್ತು ಸಲಹೆ. ಅಧಿಕಾರ ಇಲ್ಲದಾಗ ಹಳ್ಳಿಯ ಹಟ್ಟಿ ಜಪ ಮಾಡುತ್ತೀರಿ. ಅಧಿಕಾರವಿದ್ದಾಗ ತಾಜ್ ವೆಸ್ಟೆಂಡ್‌ನ ವಿಲಾಸಿ ಜೀವನ ಆಕರ್ಷಿಸುತ್ತದೆ ಅಲ್ಲವೇ..? ಹಳ್ಳಿಗರ ನಂಬಿಕೆ, ಅಮಾಯಕತೆಯನ್ನು ಬಂಡವಾಳ ಮಾಡಿಕೊಂಡು, ಮೊಸಳೆ ಕಣ್ಣೀರು ಸುರಿಸುತ್ತಾ ಮಂಕುಬೂದಿ ಎರಚುವ ನಿಮ್ಮ ಸೀರಿಯಲ್ ನಾಟಕವನ್ನು ನಂಬುವುದಕ್ಕೆ ಹಳ್ಳಿಗರು ಮೂರ್ಖರಲ್ಲ, ನಗರದವರೂ ಮುಗ್ಧರಲ್ಲ ಎಂದಿದ್ದಾರೆ.
ಕುಮಾರಸ್ವಾಮಿಯನ್ನು ಹಳ್ಳಿ ಗುಗ್ಗು ಎಂದಿದ್ದ ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಕೀಳು ಮಟ್ಟದ ರಾಜಕಾರಣ ನಿಜಕ್ಕೂ ಒಳ್ಳೆಯದಲ್ಲ. ಕುಮಾರಸ್ವಾಮಿಯವರನ್ನು ಹಳ್ಳಿ ಗುಗ್ಗು, ಜ್ಞಾನ ಇಲ್ಲ ಅನ್ನೋ ಪದ ಬಳಕೆ ಸರಿಯಲ್ಲ. ಆಡಳಿತ ಮಾಡುವ ಸರ್ಕಾರದ ಲೆವಲ್ ಅನ್ನು ಗೃಹ ಸಚಿವರು ಕೀಳು ಮಟ್ಟಕ್ಕೆ ಇಳಿಸಿದ್ದಾರೆ. ಈ ಸರ್ಕಾರ ಕೀಳು ಭಾಷೆಯ ಪದ ಬಳಸಿ ಕುಮಾರಸ್ವಾಮಿಗೆ ಅವಮಾನ ಮಾಡಿದ್ದಾರೆ. ಅವರಿಗೆ ಒಳ್ಳೆಯದಲ್ಲ ಇದು, ಕುಮಾರಸ್ವಾಮಿ ಕೇಂದ್ರದ ಸಚಿವರು. ಅವರ ಬಳಿ ಇವರು ಹೋಗಲೇಬೇಕಾಗತ್ತದೆ. ಯಾವ ಮುಖ ಇಟ್ಟುಕೊಂಡು ಹೋಗುತ್ತಾರೆ. ಇಂತಹ ಭಾಷೆ ಬಳಸೋದು ಕಾಂಗ್ರೆಸ್ ಸಂಸ್ಕೃತಿ. ಎಲ್ಲರ ಬಗ್ಗೆ ಈ ರೀತಿ ಮಾತಾಡಿ ಮಾತಾಡಿ ಗೃಹ ಸಚಿವ ಸ್ಥಾನದ ಗೌರವವನ್ನೇ ಕಳೆಯುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ನಾಳೆ ನಿನಗೂ ಇದೇ ರೀತಿಯ ಪರಿಸ್ಥಿತಿ ಬರುತ್ತದೆ ನೋಡು ಎಂದು ಆಕ್ರೋಶ ಹೊರ ಹಾಕಿದ್ದಾರೆ.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ನಾನೂ ಕೂಡ ಹಳ್ಳಿ ಗುಗ್ಗೂನೇ. ನಾನೂ ಹಳ್ಳಿಯಲ್ಲೇ ಹುಟ್ಟಿ, ತೆವಳಿಕೊಂಡು ವಿಧಾನಸೌಧಕ್ಕೆ ಬಂದಿದ್ದೇನೆ. ಕುಮಾರಸ್ವಾಮಿ ತರ ನಾನೂ ಕೂಡ ಹಳ್ಳಿಗುಗ್ಗು. ಈ ದೇಶ ಹಳ್ಳಿಗಳ ದೇಶ. ಈ ದೇಶ ಹಳ್ಳಿ ಗುಗ್ಗುಗಳ ದೇಶ ಅಂತ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಪ್ರಿಯಾಂಕ್ ಖರ್ಗೆ ತರ ಗೋಲ್ಡನ್ ಸ್ಪೂನ್ ಬಾಯಲ್ಲಿಟ್ಟುಕೊಂಡು ಹುಟ್ಟೋಕಾಗುತ್ತಾ..? ಹಳ್ಳಿಯಲ್ಲಿ ಹುಟ್ಟಿದ್ದಕ್ಕೆ ನಮಗೆ ಗರ್ವ ಇದೆ. ಪಟ್ಟಣದಲ್ಲಿ ಯಾಂತ್ರಿಕ ಬದುಕಿದೆ. ಪಟ್ಟಣದಲ್ಲಿ ಹುಟ್ಟಿದವರಿಗೆ ಹಳ್ಳಿಯಲ್ಲಿ ಹುಟ್ಟಬೇಕಿತ್ತು ಅನಿಸಲಿದೆ. ಹಾಗಂತ ಅವರು ಗುಗ್ಗುಗಳಾಗ್ತಾರಾ.? ಕಾಂಗ್ರೆಸ್ನವರ ಪ್ರಕಾರ ಹಳ್ಳಿಯವರು ಗುಗ್ಗುಗಳೇ..? ಪ್ರಿಯಾಂಕ್ ಖರ್ಗೆಯವರೇ ನಿಮಗೆ ಓಟ್ ಹಾಕಿದ್ದು ಹಳ್ಳಿ ಗುಗ್ಗುಗಳೇ..? ನಿಮ್ಮ ಗರ್ವ, ಹಟ್ಟಹಾಸಕ್ಕೆ ಜನ ಉತ್ತರ ಕೊಡ್ತಾರೆ ಎಂದು ಎಚ್ಚರಿಸಿದ್ದಾರೆ.
ರಾಜಕಾರಣದಲ್ಲಿ ಯಾರು ಏನೇನು ಮಾಡ್ತಿದ್ದಾರೆ..? ಏನೇನು ಮಾತಾಡ್ತಿದ್ದಾರೆ ಅನ್ನೋದನ್ನು ಹಳ್ಳಿಜನ ಚೆನ್ನಾಗಿ ಬಲ್ಲವನಾಗಿದ್ದಾನೆ. ಸಮಯ ಬಂದಾಯ ಹಳ್ಳಿಗುಗ್ಗು ಏನು ಮಾಡಬಲ್ಲ ಅನ್ನೋದನ್ನು ತೋರಿಸುತ್ತಾನೆ ಅನ್ನೋ ಪರಿಜ್ಞಾನ ರಾಜಕಾರಣಿಗಳಿಗೆ ಇದ್ದರೆ ಒಳಿತು. ಆಡಳಿತ ಪಕ್ಷ, ವಿರೋಧ ಪಕ್ಷ ಕಿತ್ತಾಡುವುದು ಸರ್ವೇ ಸಾಮಾನ್ಯ. ಆದರೆ ಅದು ಅವರವರ ರಾಜಕೀಯ ತೆವಲು. ಅಂದ ಮಾತ್ರಕ್ಕೆ ಬೇರೆ ಯಾರನ್ನೋ ಹಿಯಾಳಿಸಿ ಮಾತನಾಡುವುದು ತರವಲ್ಲ ಅನ್ನೋ ಅರಿವು ನಮ್ಮ ಗೃಹ ಸಚಿವರಿಗೆ ಇರಬೇಕಿತ್ತು. ಮಾತಿನ ಭರದಲ್ಲಿ ಮಾತನಾಡಿದ್ದನ್ನು ಸರಿಪಡಿಸಿಕೊಳ್ಳಬಹುದಿತ್ತು. ಆದರೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ. ಇದು ನಾಚಿಕೆಗೇಡಿನ ವಿಚಾರ.


