ಬೆಂಗಳೂರಿನ ರಾಜಾಜಿನಗರದಲ್ಲಿ ಏಳು ಮಂದಿ ದಾರುಣ ಹತ್ಯೆ ಪ್ರಕರಣದಲ್ಲಿ ಇಲ್ಲೀವರೆಗೂ ಪೊಲೀಸರು ಹೆಣಗಳನ್ನು ಹುಡುಕುವ ಕೆಲಸ ಮಾಡಿದ್ದರು. ನಂದಿಬೆಟ್ಟದಲ್ಲಿ 1 ಬಾಲಕನ ಶವ ಹಾಗೂ ಸೇಲಂನಲ್ಲಿ ಹೆಂಡತಿ ಹಾಗೂ ಅತ್ತೆಯ ಶವ, ಇನ್ನು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಹಂತಕನ ಬಾಮೈದ ಹಾಗೂ ಆತನ ಹೆಂಡತಿ ಶವ ಇನ್ನು ಅಂತಿಮವಾಗಿ ಚಾರ್ಮಾಡಿ ಘಾಟ್ನಲ್ಲಿ ನಳಿನಿ ಮತ್ತು ಶಂಕರ್ ಮೃತದೇಹಗಳನ್ನು ಕಂದಕದಿಂದ ಮೇಲೆ ತಂದು ಅಂಬ್ಯುಲೆನ್ಸ್ ಮೂಲಕ ಹಾಸನದ ಹಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಿದ್ದರು. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿ ಸಮೀಪ ಕಂದಕದಿಂದ ಶವ ಮೇಲೆತ್ತಿ ಹಾಸನದ ಹಿಮ್ಸ್ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಹಸ್ತಾಂತರ ಮಾಡಿದ್ದಾರೆ.
ಹಂತಕ ಇಂದುಶೇಖರ್ಗೆ ಇಂದಿನಿಂದ ಪೊಲೀಸ್ ಇಲಾಖೆ ಅಧಿಕಾರಿಗಳು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ. ಇಷ್ಟು ದಿನಗಳವರೆಗೂ ಮೃತದೇಹ ಪತ್ತೆ ಮಾಡೋದು ಬಹಳ ಮುಖ್ಯವಾಗಿತ್ತು. ಹೀಗಾಗಿ ವಿಚಾರಣೆ ಸಾಧ್ಯವಾಗಿರಲಿಲ್ಲ. ಇಂದಿನಿಂದ ಕೊಲೆಗೆ ಕಾರಣ ಏನು ಅನ್ನೋದನ್ನು ಸೇರಿದಂತೆ ಸಾಕಷ್ಟು ಅನುಮಾನಗಳ ಕುರಿತಾಗಿ ವಿಚಾರಣೆ ನಡೆಸಲಿದ್ದಾರೆ. ಖುದ್ದು ಡಿಸಿಪಿ ನೇಮಗೌಡ ವಿಚಾರಣೆ ನಡೆಸಲಿದ್ದಾರೆ. ಮತ್ತೊಂದು ಕಡೆ ಆರೋಪಿ ಇಂದುಶೇಖರ್ ಮಗಳನ್ನ ಸಹ ಈಗಾಗಲೇ ಬಾಲ ನ್ಯಾಯಮಂಡಳಿ ಮುಂದೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲಿದ್ದಾರೆ. ಹತ್ತು ದಿನಗಳ ಕಾಲ ಈಗಾಗಲೇ ಕಸ್ಟಡಿಗೆ ಪಡೆದು ಮಹಿಳಾ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.
7 ಜನರನ್ನು ನಿರ್ದಯವಾಗಿ ಹತ್ಯೆ ಮಾಡಿದ ಇಂದುಶೇಖರ್ನ ಅಪ್ರಾಪ್ತ ಪುತ್ರಿಯನ್ನು ಬಾಲ ನ್ಯಾಯಮಂಡಳಿ ಮುಂದೆಯೇ ಹಾಜರುಪಡಿಸಿ ಹೇಳಿಕೆ ಪಡೆಯಲಾಗಿದೆ. ಸಾಂತ್ವನ ಕೇಂದ್ರದಲ್ಲಿ ಇರಿಸಿ ವಿಚಾರಣೆ ಮಾಡಲಾಗ್ತಿದೆ. ಇದರ ಜೊತೆಗೆ ಸದ್ಯಕ್ಕೆ ಶಾಲಾ ದಾಖಲಾತಿಗಳನ್ನ ಪರಿಶೀಲಿಸ್ತಿದ್ದು, ಆರೋಪಿಯಂತೆ ಪರಿಗಣಿಸುವ ನಿಟ್ಟಿನಲ್ಲೂ ಕಾನೂನು ಸಲಹೆ ಪಡೆಯುತ್ತಿದ್ದಾರೆ. ಕೊಲೆ ನಡೆದ ಸಂದರ್ಭದಲ್ಲಿ ಆ ಯುವತಿ ಅಪ್ರಾಪ್ತಳಾಗಿದ್ದಳು. ಇದೀಗ ಕಳೆದ ಭಾನುವಾರ ಆಕೆಗೆ 18 ವರ್ಷ ತುಂಬಿದ್ದು, ಆಕೆಯನ್ನು ವಯಸ್ಕಳು ಎಂದು ಪರಿಗಣಿಸಬಹುದಾ ಅನ್ನೋ ಬಗ್ಗೆ ವಕೀಲರ ಜೊತೆ ಚರ್ಚೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಇಂದುಶೇಖರ್ ಹಲವಾರು ದ್ವಂದ್ವ ಹೇಳಿಕೆಗಳನ್ನು ಕೊಡ್ತಿದ್ದು, ಬೇರೆ ಬೇರೆ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸರು ಸೂಕ್ತ ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಿದ್ದಾರೆ. ಆದರೆ ಈ ಪ್ರಕರಣದಿಂದ ಇಡೀ ಕರ್ನಾಟಕದ ಜನರು ಸಾಕಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗೆ ತಕ್ಕ ಶಿಕ್ಷೆ ಆಗಲಿ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಕೋರ್ಟ್ನಲ್ಲಿ ಆದಷ್ಟು ಬೇಗ ಈ ಆರೋಪಿಗೆ ಸೂಕ್ತ ಶಿಕ್ಷೆ ಪ್ರಕಟವಾದರೆ ನ್ಯಾಯಾಂಗದ ಮೇಲೆ ಜನರಿಗೆ ವಿಶ್ವಾಸ ಹೆಚ್ಚಾಗಲಿದೆ. ತಡವಾದಷ್ಟೂ ಜನರು ಈ ಪ್ರಕರಣದ ಬಗ್ಗೆ ಮರೆತು ಹೋಗ್ತಾರೆ. ಕಾನೂನು 7 ಕೊಲೆ ಮಾಡಿದವನಿಗೂ ಶಿಕ್ಷೆ ಕೊಡುವುದಕ್ಕೆ ಹಿಂದೆ ಮುಂದೆ ನೋಡುತ್ತದೆ ಎನ್ನುವ ಭಾವನೆ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಈಗಾಗಲೇ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪನೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಸರ್ಕಾರ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ, ಆದಷ್ಟು ಬೇಗ ತೀರ್ಪು ಬರುವಂತೆ ನೋಡಿಕೊಳ್ಳಬೇಕಿದೆ.



