ಚಿಕ್ಕಮಗಳೂರಿನ ಘನಘೋರ ಘಟನೆಯೊಂದು ನಡೆದಿದೆ. ತಾಳಿ ಕಟ್ಟಿ ಮನೆ ಬಾಳಸಂಗಾತಿ ಅಂತಾ ಸ್ವೀಕಾರ ಮಾಡಿದ್ದ ಹೆಂಡತಿಯನ್ನು ಕ್ಷುಲ್ಲಕ ಕಾರಣಕ್ಕೆ ಕೊಂದಿದ್ದಾನೆ. ಆಕಸ್ಮಿಕವಾಗಿ ಸಾವು ಸಂಭಸಿತೋ ಏನೋ ಗೊತ್ತಿಲ್ಲ. ಆದರೆ ಹೆಂಡತಿ ಸತ್ತ ಬಳಿಕ ಆತ ತನ್ನ ತಂದೆ ತಾಯಿ ಜೊತೆಗೆ ಸೇರಿಕೊಂಡು ಮಾಡಬಾರದ್ದನ್ನು ಮಾಡಿದ್ದಾನೆ. ಎಲ್ಲರಿಗೂ ಸುಳ್ಳು ಹೇಳಬಹುದು, ಆದರೆ ಮೇಲೊಬ್ಬ ಎಲ್ಲವನ್ನೂ ನೋಡುತ್ತಿರುತ್ತಾನೆ ಎನ್ನುವ ಮಾತಿನಂತೆ ಎಲ್ಲರ ಕಣ್ಣಿಗೂ ಮಣ್ಣೆರೆಚುವ ಕೆಲಸ ಮಾಡಿದ್ದ ಈ ಕುಟುಂಬ ಕೊನೆಗೆ ಮೂಢನಂಬಿಕೆ ಅನ್ನೋ ಭಯದ ನೆರಳಲ್ಲಿ ವಿಲವಿಲನೆ ಒದ್ದಾಡಿ ಕೈಗೆ ಕೋಳ ಹಾಕಿಕೊಂಡಿದೆ. ಪೂಜೆ ಪುನಸ್ಕಾರ ಮಾಡಿ ದೇವಸ್ಥಾನದ ಮರದಲ್ಲಿ ಹೊಡೆದಿದ್ದ ತಗಡಿನ ಚೀಟಿಯೇ ಹಂತಕರ ರಹಸ್ಯ ಬಯಲು ಮಾಡಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಆಲಘಟ್ಟ ನಿವಾಸಿ ವಿಜಯ್‌ಗೆ ಭಾರತಿ ಎಂಬಾಕೆ ಜೊತೆಗೆ ವಿವಾಹ ಆಗಿತ್ತು. ಇಬ್ಬರ ಸುಖ ಸಂಸಾರಕ್ಕೆ ಒಂದೂವರೆ ವರ್ಷದ ಹಿಂದೆ ಹೆಣ್ಣು ಮಗು ಜನಿಸಿತ್ತು. ಆದರೆ ವರದಕ್ಷಿಣೆಗಾಗಿ ಪದೇ ಪದೇ ಹೆಂಡತಿ ಜೊತೆಗೆ ಜಗಳ ಮಾಡುತ್ತಿದ್ದ ವಿಜಯ್, ತನ್ನ ಶೋಕಿಗಾಗಿ ಖರೀದಿ ಮಾಡಿದ್ದ ಕಾರಿನ ಲೋನ್ ತೀರಿಸಲು ತವರು ಮನೆಯಿಂದ 2 ಲಕ್ಷ ರೂಪಾಯಿ ಹಣ ಈಸ್ಕೊಂಡು ಬಾ ಅಂತಾ ಕಾಟ ಕೊಡ್ತಿದ್ನಂತೆ. ಇದೇ ವಿಚಾರವಾಗಿ ಕಳೆದ ತಿಂಗಳ ನಾಲ್ಕನೇ ತಾರೀಕು ಗಂಡ ಹೆಂಡತಿ ನಡುವೆ ಗಲಾಟೆ ಆಗಿದೆ. ಆ ವೇಳೆ ಭಾರತಿ ಅದೇನು ಅಂದಳೋ ಏನೋ ಸಿಟ್ಟಿನಿಂದ ಹೆಂಡತಿ ತಲೆಗೆ ದೊಣ್ಣೆಯಿಂದ ಬಲವಾಗಿ ಹೊಡೆದಿದ್ದಾನೆ. ಒಂದೇ ಏಟಿಗೆ ಕುಸಿದು ಬಿದ್ದ ಭಾರತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಮಗ ಸೊಸೆ ಜಗಳ ನೋಡುತ್ತಿದ್ದ ಅಪ್ಪ ಅಮ್ಮನಿಗೆ ಘಟನೆ ಬಗ್ಗೆ ಅರಿವಾಗಿದೆ. ಭಾರತಿಯನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಆದರೆ ಭಾರತಿ ಅಷ್ಟರಲ್ಲಿ ಉಸಿರು ನಿಲ್ಲಿಸಿ ಆಗಿತ್ತು. ಯಾವಾಗ ಭಾರತಿ ಸತ್ತು ಹೋದಳು ಅಂತಾ ಗೊತ್ತಾಯ್ತೋ, ಅಪ್ಪ-ಅಮ್ಮ ಕಾನೂನು ರೀತಿ ಪೊಲೀಸರಿಗೆ ಮಾಹಿತಿ ಕೊಡಬೇಕಿತ್ತು. ಆದರೆ ಮಗ ವಿಜಯ್ ಜೊತೆಗೆ ಸೇರಿಕೊಂಡು ಖತರ್ನಾಕ್ ಐಡಿಯಾ ಮಾಡಿದ್ದಾರೆ. ಯಾರಿಗೂ ಗೊತ್ತಾಗದಂತೆ ಮಗನ ಜೊತೆಗೆ ಸೇರ್ಕೊಂಡು ಭಾರತಿ ಮೃತದೇಹವನ್ನ ಹೊಲಕ್ಕೆ ಸಾಗಿಸಿದ್ದಾರೆ. ಆ ಬಳಿಕ ತಮ್ಮದೇ ಜಮೀನಿನಲ್ಲಿ ಪಾಳು ಬಿದ್ದಿದ್ದ 700 ಅಡಿ ಕೊಳವೆ ಬಾವಿಗೆ ಮೃತದೇಹವನ್ನು ಕತ್ತರಿಸಿ ತುಂಬಿದ್ದಾರೆ. ಆ ಬಳಿಕ ಏನೂ ಗೊತ್ತೇ ಇಲ್ಲ ಎನ್ನುವಂತೆ ಮನೆಗೆ ಬಂದು ತಮ್ಮ ಪಾಡಿಗೆ ತಾವು ಇದ್ದಾರೆ.
ಒಂದೆರಡು ದಿನಗಳು ಕಳೆದ ಬಳಿಕ ಹೆಂಡತಿ ಕಥೆ ಮುಗಿಸಿದ್ದ ವಿಜಯ್, ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾನೆ. ನನ್ನ ಹೆಂಡತಿ ಶಿವಮೊಗ್ಗ ಆಸ್ಪತ್ರೆಯಲ್ಲಿ ಇರೋ ತನ್ನ ಅಜ್ಜಿಯನ್ನ ನೋಡಿಕೊಮಡು ಬರ್ತೀನಿ ಅಂತಾ ಹೋಗಿದ್ದವಳು ವಾಪಸ್ ಬಂದಿಲ್ಲ. ದಯವಿಟ್ಟು ಹುಡುಕಿಕೊಡಿ ಅಂತಾ ಮೊಸಳೆ ಕಣ್ಣೀರು ಸುರಿಸಿದ್ದಾನೆ. ಅಷ್ಟೇ ಅಲ್ಲದೆ ನನ್ನ ಹೆಂಡತಿಗೆ ಸ್ವಲ್ಪ ಮಾನಸಿಕತೆ ಸರಿಯಿರಲಿಲ್ಲ ಅಂತಾನೂ ಹೇಳಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸ್ರು ತನಿಖೆ ನಡೆಸಿ ಮೂಲೆ ಮೂಲೆ ಜಾಲಾಡಿದ್ರು. ಆದರೂ ಭಾರತಿಯ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಭಾರತಿ ಪೋಷಕರಿಗೂ ಇದೇ ಕಥೆ ಹೇಳಿದ್ದ. ಆದರೆ ದಿನಗಳು ಉರುಳಿದಂತೆ ವಿಜಯ್ ಹಾಗೂ ಕುಟುಂಬಸ್ಥರಿಗೆ ನಡುಕ ಶುರುವಾಗಿತ್ತು. ನನ್ನನ್ನು ಕೊಂದು ಮುಗಿಸಿದ ಗಂಡ ಹಾಗೂ ಸಹಾಯ ಮಾಡಿದ ಅತ್ತೆ, ಮಾವನನ್ನು ಕಾಡುತ್ತಾಳೆ ಅನ್ನೋ ಭಯ ಅವರನ್ನು ಕಾಡಿತ್ತು.
ಸತ್ತು ಹೋದ ಹೆಂಡತಿ ಭಾರತಿ, ದೆವ್ವವಾಗಿ ಕಾಡ್ತಾಳೆ ಅನ್ನೋ ಭಯದಿಂದ ಊರೂರು ಸುತ್ತಿ, ಪೂಜೆ ಪುನಸ್ಕಾರ ಮಾಡಲು ಶುರುವಾಗ್ತಿದ್ದ ಹಾಗೆ ಭಾರತಿ ಕುಟುಂಬಸ್ಥರಲ್ಲಿ ಸಂಶಯ ಮನೆ ಮಾಡಿತ್ತು. ಮನೆಯಲ್ಲಿ ಹತ್ತಾರು ಹೋಮ ಹವನ ಮಾಡಿಸಿದರೂ ಭಯ ಮಾತ್ರ ಕಡಿಮೆ ಆಗಿರಲಿಲ್ಲ. ಪದೇ ಪದೇ ಪೂಜೆ ಮಾಡಿಸುತ್ತಿದ್ದ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಕಳೆದು ಹೋದ ಹೆಂಡತಿ ಸಿಗಲಿ ಅಂತಾ ಮಾಡುತ್ತಿದ್ದೇವೆ ಎನ್ನುತ್ತಿದ್ದರು. ಆ ಬಳಿಕ ಭಾರತಿ ಕುಟುಂಬಸ್ಥರನ್ನು ಮೆಚ್ಚಿಸಲು ಭಾರತಿ ಅಣ್ಣ ಮಾರುತಿಯನ್ನು ಕರೆದುಕೊಂಡು ಚಟ್ನಪಾಳ್ಯದ ಚೌಡೇಶ್ವರಿ ದೇವಾಲಯಕ್ಕೆ ಹೋಗಿದ್ದರು.ಇಲ್ಲಿ ಸುಮ್ಮನೆ ಪೂಜೆ ಮಾಡಿಸಿಕೊಂಡು ಬಂದಿದ್ದರೆ ಎಲ್ಲವೂ ಸುಖಾಂತ್ಯ ಆಗ್ತಿತ್ತು. ಆದರೆ ಅಲ್ಲೊಂದು ಎಡವಟ್ಟು ಮಾಡಿ ಸಿಕ್ಕಿ ಬಿದ್ದಿದ್ದಾರೆ.
ಚಟ್ನಪಾಳ್ಯ ಚೌಡೇಶ್ವರಿ ದೇವಸ್ಥಾನಕ್ಕೆ ಹೋಗಿದ್ದ ವಿಜಯ್ ಕುಟುಂಬ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರ ಮಾಡಿಸಿದ ಬಳಿಕ ಯಾರಿಗೂ ಗೊತ್ತಾಗದಂತೆ ತಗಡಿನ ಚೀಟಿಯೊಂದನ್ನ ಬರೆಸಿ, ನಿನ್ನನ್ನ ನಾವೇ ಹತ್ಯೆ ಮಾಡಿದ್ದೇವೆ. ನಮಗೆ ಯಾವುದೇ ತೊಂದರೆ ಕೊಡಬೇಡ ಎಂದು ಮನವಿ ಮಾಡಿಕೊಂಡಿದ್ದ. ತಗಡಿನ ಚೀಟಿಯನ್ನು ಸುತ್ತಿ ಅದರ ಮೇಲೆ ಭಾರತಿಯ ಫೋಟೋ ಇಟ್ಟು ಅರಳಿ ಮರಕ್ಕೆ ಮೊಳೆ ಹೊಡೆದು ವಾಪಸ್ ಆಗಿದ್ದರು. ಆ ಬಳಿಕ ಅನುಮಾನದ ಸುಳಿಯಲ್ಲೇ ಕಾಲ ಕಳೆದಿದ್ದ ಭಾರತ ಅಣ್ಣ ಯಾರಿಗೂ ಗೊತ್ತಾಗದಂತೆ ತಗಡಿನ ಚೀಟಿಯನ್ನು ಬಿಡಿಸಿ ನೋಡಿದಾಗ ಇವರ ದುಷ್ಕೃತ್ಯ ಬಯಲಾಗಿದೆ. ಕೂಡಲೇ ಕಡೂರು ಪೊಲೀಸ್ ಸ್ಟೇಷನ್‌ಗೆ ತೆರಳಿ ಇನ್ಸ್‌ಪೆಕ್ಟರ್ ರಫೀಕ್ ಮುಂದೆ ಎಲ್ಲಾ ವಿಚಾರ ಹೇಳಿದ್ದಾರೆ. ಪೊಲೀಸ್ರು ವಿಜಯ್ ಜೊತೆ ಆತನ ಅಪ್ಪ ಅಮ್ಮನನ್ನ ಕರೆತಂದು ವಿಚಾರಣೆ ಶುರು ಮಾಡ್ತಿದ್ದ ಹಾಗೆ ಅಸಲಿ ಸತ್ಯ ಬಯಲಾಗಿದೆ. ಆದರೆ ಅಂತಿಮವಾಗಿ ಒಂದೂವರೆ ವರ್ಷದ ಹೆಣ್ಣು ಮಗು ಅನಾಥ ಆಗಿದೆ.


