The Public Spot
Uncategorized

ಅಮೆರಿಕ ಎದುರು ಗುಟುರು ಹಾಕಿದ ಭಾರತ – ರಷ್ಯಾ ಜೋಡಿ..

ಭಾರತ ಮತ್ತು ರಷ್ಯಾ ಇಂದಿನಿಂದ ಆರಂಭ ಆಗಿದ್ದಲ್ಲ. ರಷ್ಯಾ ಜೊತೆಗೆ ಭಾರತ ರಕ್ಷಣಾ ಸಂಬಂಧಿತ ಒಪ್ಪಂದ ಮಾತ್ರವಲ್ಲದೆ ಸಾಕಷ್ಟು ವ್ಯಾಪಾರ ವಹಿವಾಟು ನಡೆಸಿಕೊಂಡು ಬಾಂಧವ್ಯ ಬೆಸೆದುಕೊಂಡಿದೆ. ವ್ಯಾಪಾರ, ಆರ್ಥಿಕತೆ, ಬಾಹ್ಯಾಕಾಶ, ರಕ್ಷಣೆ ಹೀಗೆ ಎಲ್ಲಾ ರಂಗಗಳಲ್ಲೂ ಎರಡೂ ದೇಶಗಳ ಮಧ್ಯೆ ಉತ್ತಮ ಸ್ನೇಹ ಸಂಬಂಧವಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕ ತನ್ನ ಶ್ರೀಮಂತಿಕೆಯನ್ನು ಬಳಸಿಕೊಂಡು ಭಾರತವನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನ ಮಾಡಿದರೂ ಭಾರತ ಮತ್ತು ರಷ್ಯಾ ನಡುವಿನ ವಿಶ್ವಾಸ ಕುಗ್ಗುವುದಕ್ಕೆ ಸಾಧ್ಯವೇ ಇಲ್ಲ ಎನ್ನುವುದನ್ನು ಉಭಯ ರಾಷ್ಟ್ರಗಳು ಜಗತ್ತಿಗೆ ಸಾರಿ ಸಾರಿ ಹೇಳುತ್ತಿವೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 28 ಗಂಟೆಗಳ ಭಾರತ ಭೇಟಿಯಲ್ಲಿ ಸಾಕಷ್ಟು ವಿಚಾರಗಳಿಗೆ ಆದ್ಯತೆ ಕೊಡಲಾಗಿದೆ. ಎರಡೂ ರಾಷ್ಟ್ರಗಳ ಸ್ನೇಹಕ್ಕೆ ಮತ್ತೊಂದು ಬೆಸುಗೆ ಎನ್ನುವಂತೆ ಭಾರತ ಹಾಗೂ ರಷ್ಯಾ ಉಭಯ ರಾಷ್ಟ್ರಗಳು ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಪಣತೊಟ್ಟಿದ್ದಾರೆ. 23ನೇ ಭಾರತ – ರಷ್ಯಾ ವ್ಯಾಪಾರ ಶೃಂಗ ಸಭೆಗಾಗಿ ಭಾರತಕ್ಕೆ ಬಂದಿದ್ದ ವ್ಲಾಡಿಮಿರ್​ ಪುಟಿನ್ ಅವರನ್ನು ಸ್ವತಃ ಪ್ರಧಾನಿ ಮೋದಿಯೇ ಸ್ವಾಗತ ಮಾಡಿದ್ದು ವಿಶೇಷ. ಶಿಷ್ಟಾಚಾರ ಬದಿಗೊತ್ತಿ ಖುದ್ದು ಪ್ರಧಾನಿ ಮೋದಿ ಪಾಲಂ ವಿಮಾನ ನಿಲ್ದಾಣಕ್ಕೆ ತೆರಳಿ ಬರಮಾಡಿಕೊಂಡರು. ತಮ್ಮದೇ ಕಾರಿನಲ್ಲಿ ನಿವಾಸಕ್ಕೆ ಕರೆದೊಯ್ದು ಔತಣ ಕೂಟ ನೀಡಿದ್ರು. ರಾಷ್ಟ್ರಪತಿ ಭವನದಲ್ಲಿ ಭಾರತೀಯ ಸೇನೆಯ ಮೂರೂ ಪಡೆಗಳಿಂದ ಗೌರವ ರಕ್ಷೆ ನೀಡಲಾಯ್ತು. ರಾಜ್‌ ಘಾಟ್‌ಗೆ ತೆರಳಿದ ಪುಟಿನ್‌ ಮಹಾತ್ಮಗಾಂಧಿ ಸ್ಮಾರಕಕ್ಕೆ ಹೂಗುಚ್ಚ ಅರ್ಪಿಸಿದ್ರು.

ಹೈದರಾಬಾದ್ ಹೌಸ್‌ನಲ್ಲಿ ನಡೆದ 23ನೇ ಭಾರತ-ರಷ್ಯಾ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ರಷ್ಯಾ ಅಧ್ಯಕ್ಷ ಫುಟಿನ್ ದ್ವಿಪಕ್ಷೀಯ ಸಭೆ ನಡೆಸಿದ್ರು. ಹಲವು ಐತಿಹಾಸಿಕ ಒಪ್ಪಂದಗಳಿಗೆ ಸಹಿ ಹಾಕಿದ ಉಭತ್ರಯರು, ರಕ್ಷಣೆ, ಇಂಧನ, ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಕುರಿತಂತೆ ನಿರ್ಣಯ ಮಾಡಿದ್ರು. ಭಾರತಕ್ಕೆ ಇಂಧನ ಪೂರೈಕೆ ಮುಂದುವರಿಸುವುದಾಗಿ ಪುಟಿನ್ ಘೋಷಿಸಿದ್ರು. ರಷ್ಯಾ – ಉಕ್ರೇನ್ ನಡುವೆ ಶಾಂತಿ ಸ್ಥಾಪನೆ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಚರ್ಚಿಸಿ ಶೀಘ್ರ ನಿರ್ಧಾರ ಮಾಡುವಂತೆ ಸಲಹೆ ನೀಡಿದ್ರು.

ಎರಡೂ ದೇಶಗಳ ಮಧ್ಯೆ 2030ರ ವೇಳೆಗೆ 100 ಶತಕೋಟಿ ಡಾಲರ್‌ ವ್ಯಾಪಾರ, ಆರೋಗ್ಯ ಮತ್ತು ಆಹಾರ ಸುರಕ್ಷತಾ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡುವುದು ಸೇರಿದಂತೆ ಸಾಕಷ್ಟು ಒಡಂಬಡಿಕೆಗಳಿಗೆ ಸಹಿ ಹಾಕಲಾಯ್ತು. ಎರಡೂ ದೇಶಗಳ ಮಧ್ಯೆ ವಲಸೆ ಮತ್ತು ಚಲನಶೀಲತೆ ಕುರಿತಂತೆ ಒಪ್ಪಂದ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪರಸ್ಪರ ಸಹಕಾರ, ಭಾರತಕ್ಕೆ ಆಗಮಿಸುವ ರಷ್ಯಾ ನಾಗರಿಕರು ಮತ್ತು ಗುಂಪು ಪ್ರವಾಸಕ್ಕೆ 30 ದಿನಗಳ ಕಾಲ ಉಚಿತ ಇ-ವೀಸಾ ನೀಡುವುದು, ಮಿಲಿಟರಿ, ಬಾಹ್ಯಾಕಾಶ, AI ಮತ್ತು ಹಡಗು ನಿರ್ಮಾಣಕ್ಕೆ ಸಹಕಾರದ ಬಗ್ಗೆ ಚರ್ಚೆ ನಡೆಸಲಾಯ್ತು.

ಭಾರತದ ರೂಪಾಯಿ ಮತ್ತು ರಷ್ಯಾದ ರುಬಲ್ ಪರಸ್ಪರ ಚಲಾವಣೆ, ಅಗತ್ಯತೆಗೆ ಅನುಗುಣವಾಗಿ ತೈಲ, ಅನಿಲ, ಕಲ್ಲಿದ್ದಲು ಪೂರೈಕೆಗೆ ನಿರ್ಧರಿಸಲಾಯ್ತು. ತಮಿಳುನಾಡಿನ ಕುಡಂಕುಳಂ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಬಾಕಿ ಇರೋ ರಿಯಾಕ್ಟರ್‌ಗಳ ನಿರ್ಮಾಣ ಪೂರ್ಣಗೊಳಿಸುವುದು, ಬೆಲಾರಸ್​ನಿಂದ ಹಿಂದೂ ಮಹಾಸಾಗರ ಮಾರ್ಗವಾಗಿ ಅಂತರಾಷ್ಟ್ರೀಯ ಉತ್ತರ-ದಕ್ಷಿಣ ಸಮುದ್ರ ಕಾರಿಡಾರ್ ನಿರ್ಮಾಣದ ಬಗ್ಗೆಯೂ ಉಭಯ ನಾಯಕರು ಒಪ್ಪಂದಕ್ಕೆ ಸಮ್ಮತಿಸಿದ್ರು.

ಉಕ್ರೇನ್ ವಿಷಯದಲ್ಲಿ ಭಾರತವು ಆರಂಭದಿಂದಲೂ ಶಾಂತಿಯನ್ನೇ ಪ್ರತಿಪಾದಿಸುತ್ತಿದೆ. ಶಾಂತಿಯುತ ಮತ್ತು ಶಾಶ್ವತ ಪರಿಹಾರಕ್ಕಾಗಿ ಆಗುತ್ತಿರುವ ಪ್ರಯತ್ನಗಳನ್ನ ಸ್ವಾಗತಿಸುತ್ತೇವೆ. ಭಾರತ ಸದಾ ತನ್ನ ಪಾತ್ರ ಪ್ರತಿಪಾದನೆಗೆ ಸಿದ್ಧವಿದೆ. ಭವಿಷ್ಯದಲ್ಲಿಯೂ ಭಾರತ ಹಾಗೆಯೇ ಇರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ರೆ, ನಮ್ಮ ದೇಶ ರಾಷ್ಟ್ರೀಯ ಕರೆನ್ಸಿ ಬಳಕೆಯತ್ತ ಸಾಗುತ್ತಿದೆ. ವಾಣಿಜ್ಯ ಪಾವತಿಗಳಲ್ಲಿ ಈ ಪಾಲು ಈಗಾಗಲೇ ಶೇಕಡ 96 ರಷ್ಟಿದೆ. ಬ್ಯಾಂಕಿಂಗ್ ಸಹಕಾರದೊಂದಿಗೆ ಎಲ್ಲವೂ ಸುಗಮವಾಗಿ ನಡೆಯುತ್ತಿದೆ. ಭಾರತದ ರೂಪಾಯಿಯನ್ನ ರಷ್ಯಾ ಸ್ವೀಕರಿಸುತ್ತದೆ ಎಂದಿದ್ದಾರೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್. ದುಬಾರಿ ಸೆಸ್​​ ಹೇರಿಕೆ ಮೂಲಕ ಭಾರತವನ್ನು ದೂರ ಇಡುವ ಪ್ರಯತ್ನವನ್ನು ಅಮೆರಿಕ ಮಾಡಿದ್ರೆ, ಅಮೆರಿಕದ ಕಣ್ಣು ಕುಕ್ಕುವಂತೆ ರಷ್ಯಾ ಅಧ್ಯಕ್ಷರು ಭಾರತವನ್ನು ಅಪ್ಪಿಕೊಂಡಿರುವುದು ಅಮೆರಿಕ ಪಾಲಿಗೆ ಬಿಸಿತುಪ್ಪ ಎನ್ನಬಹುದು.

Related posts

GST Effect; ಇಂದಿನಿಂದ ಬಹುತೇಕ ವಸ್ತುಗಳ ದರ ಇಳಿಕೆ.. ಯಾವ್ಯಾವ ವಸ್ತುಗಳ ಬೆಲೆ ಇಳಿಕೆ ನೋಡಿ..

Publicspot

Nepal Politics: ನೇಪಾಳದಲ್ಲಿ ರಾಜಕೀಯ ಕ್ಷಿಪ್ರ ಕ್ರಾಂತಿ.. ಓಡಿಹೋದ ಓಲಿ..

Publicspot

Devil Release; ರಾಜ್ಯಾದ್ಯಂತ ನಟ ದರ್ಶನ್​ ಫ್ಯಾನ್ಸ್​​ ಆರ್ಭಟ..

Publicspot

ಏನಿದು ತಮಿಳುನಾಡು ಕಾರ್ತಿಕ ದೀಪೋತ್ಸವ.. ನ್ಯಾಯಾಧೀಶರಿಗೇ ವಾಗ್ದಂಡನೆ ಪ್ರಕ್ರಿಯೆ..?

Publicspot

Modi Japan Tour: ದೇಶದ ವಿದೇಶಾಂಗ ನೀತಿ ಬಗ್ಗೆ ಟೀಕೆ ಒಳ್ಳೇದಾ..? ಕೆಟ್ಟದ್ದಾ..?

Publicspot

Sudeep; ದರ್ಶನ್​​ ಬಗ್ಗೆ ಟೀಕೆ ಮಾಡಿದ್ರಾ ಸುದೀಪ್​.. ಕಿಚ್ಚನ ಮಾತು ಅಪಾರ್ಥ ಆಯ್ತಾ..?

Publicspot