The Public Spot
Uncategorized

ಏನಿದು ತಮಿಳುನಾಡು ಕಾರ್ತಿಕ ದೀಪೋತ್ಸವ.. ನ್ಯಾಯಾಧೀಶರಿಗೇ ವಾಗ್ದಂಡನೆ ಪ್ರಕ್ರಿಯೆ..?

ತಮಿಳುನಾಡಿನ ತಿರುಪ್ಪರನ್​ ಕುಂಡ್ರಂನಲ್ಲಿ ಕಾರ್ತಿಕ ದೀಪೋತ್ಸವಕ್ಕೆ ಮಧುರೈ ಹೈಕೋರ್ಟ್​ ಪೀಠದ ನ್ಯಾಯಮೂರ್ತಿ ಜಿ.ಆರ್​ ಸ್ವಾಮಿನಾಥನ್​ ಸಮ್ಮತಿ ಸೂಚಿಸಿದ್ದರು. ಡಿಸೆಂಬರ್​ 3 ರಂದು ಸಂಜೆ 6 ಗಂಟೆ ಒಳಗಾಗಿ ತಿರುಪ್ಪರನ್​ ಕುಂಡ್ರಂ ಬೆಟ್ಟದಲ್ಲಿ ದರ್ಗಾ ಬಳಿ ಇರುವ ಕಂಬದ ಮೇಲೆ ದೀಪ ಹಚ್ಚಿಸಲು ಅನುಮತಿ ಕೊಡಲಾಗಿತ್ತು. ಹೈಕೋರ್ಟ್​ ಆದೇಶಕ್ಕೆ ಆಡಳಿತ ಪಕ್ಷ ಡಿಎಂಕೆ ವಿರೋಧ ಮಾಡಿದ ಬಳಿಕ ಜಿಲ್ಲಾಡಳಿತ ಮೂಲಕ ನಿಷೇಧಾಜ್ಞೆ ಜಾರಿ ಮಾಡಿಸಿತ್ತು.

ತಮಿಳುನಾಡು ಸರ್ಕಾರದ ವಾದ ಏನೆಂದರೆ ಕಳೆದ 8 ದಶಕಗಳಿಂದ ಅಲ್ಲಿ ಯಾವುದೇ ಪೂಜೆ ನಡೆಯುತ್ತಿಲ್ಲ. ಈಗ ಏಕಾಏಕಿ ದರ್ಗಾ ಸಮೀಪ ದೀಪಥೂನ್​ಗೆ ಅವಕಾಶ ಕೊಟ್ಟರೆ ಕಾನೂನು ಸುವ್ಯವಸ್ಥೆ ಹಾಳಾಗಲಿದೆ ಎನ್ನುವುದು. ಡಿಸೆಂಬರ್ 3 ರಂದು ಯಾವಾಗ ದೀಪೋತ್ಸವ ಆಚರಣೆಗೆ ಅನುಮತಿ ಸಿಗಲಿಲ್ಲವೋ ಆಗ ನ್ಯಾಯಮೂರ್ತಿಗಳು ಗರಂ ಆಗಿದ್ದರು. ವಿಡಿಯೋ ಕಾನ್ಫರೆನ್ಸ್​ ಮೂಲಕ ಮಧುರೈ ಡಿಸಿ ಹಾಗೂ ಪೊಲೀಸ್​ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು.

ಅರ್ಜಿದಾರ ವಕೀಲ ಆರ್​ ಪ್ರಭು ಅವರಿಗೆ ನೇರವಾಗಿ ಸೂಚನೆ ಕೊಟ್ಟ ನ್ಯಾಯಮೂರ್ತಿಗಳು CISF ಭದ್ರತೆಯಲ್ಲಿ ದೀಪೋತ್ಸವ ಆಚರಣೆ ಮಾಡುವಂತೆ ಸೂಚನೆ ಕೊಟ್ಟರು. ಆದರೆ ಅಷ್ಟರಲ್ಲಿ ರಾಜ್ಯ ಪೊಲೀಸರು ಬಂದೋಬಸ್ತ್​ ಮಾಡಿದ್ದರು. ನಿಷೇಧಾಜ್ಞೆ ಜಾರಿ ಮಾಡಿದ್ದರು. ಬ್ಯಾರಿಕೇಡ್​ಗಳನ್ನು ಹಾಕಿ ಭದ್ರತೆ ಮಾಡಿದ್ದರು. ರಾಜ್ಯ ಪೊಲೀಸ್​ ಭದ್ರತೆ ಬೇಧಿಸಿ ಹೋಗಲು ಆಗಲಿಲ್ಲ. ಕಲ್ಲು ತೂರಾಟ ನಡೆದು ಸಾಕಷ್ಟು ಮಂದಿ ಗಾಯಗೊಂಡರು.

ಡಿಸೆಂಬರ್​ 4ರಂದು ಮತ್ತೆ ವಿಚಾರಣೆಗೆ ತೆಗೆದುಕೊಂಡು ಹೈಕೋರ್ಟ್​ ಮಧುರೈ ಪೀಠ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿತು. ಆಗಲೂ ರಾಜ್ಯ ಸರ್ಕಾರ ಸಮರ್ಥನೆ ಮಾಡಿಕೊಂಡಿದ್ದು, ಬೆಟ್ಟದ ಮೇಲೆ ಹೊಸ ಸಂಪ್ರದಾಯ ಶುರು ಮಾಡಲು ಸಾಧ್ಯವಿಲ್ಲ ಎಂದಿದೆ. ಜೊತೆಗೆ ಸುಪ್ರೀಂಕೋರ್ಟ್​ಗೂ ಅರ್ಜಿ ಸಲ್ಲಿಕೆ ಆಗಿದೆ. ಈ ನಡುವೆ ಮಧುರೈ ಪೀಠದ ನ್ಯಾಯಮೂರ್ತಿ G.R ಸ್ವಾಮಿನಾಥನ್​ ಅವರ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ಆರಂಭಿಸುವಂತೆ INDIA ಒಕ್ಕೂಟದ ನೂರು ಸಂಸದರು ಸಹಿ ಮಾಡಿ ಒತ್ತಾಯ ಮಾಡಿದ್ದಾರೆ.

ಮಧುರೈ ಹೈಕೋರ್ಟ್​ನ ಏಕಸದಸ್ಯ ಪೀಠ ಕಾರ್ತಿಕ ದೀಪತೋನ್​​ (ದೀಪೋತ್ಸವ)ಕ್ಕೆ ಅನುಮತಿ ನೀಡಿತ್ತು. ಹೈಕೋರ್ಟ್​ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ದ್ವಿಸದಸ್ಯ ಪೀಠಕ್ಕೆ ಅರ್ಜಿ ಹಾಕಿದ್ದು, ಈ ರೀತಿಯ ಆದೇಶ ನೀಡಿರುವುದೇ ಸಂವಿಧಾನ ವಿರೋಧಿ ಕೃತ್ಯ ಎಂದು ವಾದಿಸಿದ್ದಾರೆ. ಹತ್ತಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ದೀಪೋತ್ಸವ ಮಾಡಲಾಗಿದೆ. ಆದರೆ ಇದೀಗ ಉದ್ದೇಶಪೂರ್ವಕವಾಗಿ ದರ್ಗಾ ಬಳಿ ದೀಪೋತ್ಸವ ಆಚರಣೆ ಮಾಡಲು ಅನುಮತಿ ಕೋರಲಾಗಿದೆ. ಅವರು ಸಲ್ಲಿಸಿದ್ದು ಪಬ್ಲಿಕ್​ ಇಂಟ್ರೆಸ್ಟ್​ ಲಿಟಿಗೇಷನ್​ (PIL) ಅರ್ಜಿ ಅಲ್ಲ. ಬದಲಿಗೆ ಪ್ರೈವೇಟ್​​ ಇಂಟ್ರೆಸ್ಟ್​ ಲಿಟಿಗೇಷನ್​, ಆದರೂ ಏಕಸದಸ್ಯ ಪೀಠ ಮಾನ್ಯ ಮಾಡಿದ್ದು ಸರಿಯಲ್ಲ ಎಂದು ವಾದಿಸಿದೆ.

ಈಗಾಗಲೇ ತಮಿಳುನಾಡಿನಲ್ಲಿ ಬಿಜೆಪಿ ನಾಯಕರನ್ನು ಮುಂಜಾಗ್ರತಾ ಕ್ರಮವಾಗಿ ಬಂಧನ ಮಾಡಲಾಗಿದೆ. ತಮಿಳುನಾಡಿನ ಹಿಂದೂಗಳು ಈ ಬಗ್ಗೆ ಎಚ್ಚರರಾಗಿ ಎಂದು RSS ಮುಖ್ಯಸ್ಥ ಮೋಹನ್​ ಭಾಗವತ್​​ ಅವರು ಕರೆ ನೀಡಿದ್ದಾರೆ. ಇನ್ನು ಮಹಾಭಿಯೋಗ ಪ್ರಕ್ರಿಯೆ ಪ್ರಜಾಪ್ರಭುತ್ವ ವಿರೋಧಿ ಎಂದು 56 ಮಂದಿ ನಿವೃತ್ತ ನ್ಯಾಯಾಧೀಶರು ಬಹಿರಂಗ ಪತ್ರ ಬರೆದಿದ್ದು, ಸಂಸದರು ವಾಗ್ದಂಡನೆ ಪ್ರಕ್ರಿಯೆಯನ್ನು ಹಿಂಪಡೆಯುವಂತೆ ಒತ್ತಾಯ ಮಾಡಿದ್ದಾರೆ. ವಿಶೇಷ ಅಂದ್ರೆ ನೂರು ಜನ ಸಂಸದರಲ್ಲಿ ಕರ್ನಾಟಕದ ಮೂರು ಸಂಸದರು ಸೇರ್ಪಡೆ ಆಗಿದ್ದಾರೆ.

ಹಾಸನ ಸಂಸದ ಸ್ವರೂಪ್​ ಪಟೇಲ್​, ರಾಯಚೂರು ಸಂಸದ ಕುಮಾರ್​ ನಾಯ್ಕ್​ ಹಾಗೂ ಡಾ ಪ್ರಭಾ ಮಲ್ಲಿಕಾರ್ಜುನ್​ ಕೂಡ ಸಹಿ ಮಾಡಿರುವುದು ಬಿಜೆಪಿ ನಾಯಕರ ಕಣ್ಣು ಕೆಂಪಾಗಿಸಿದೆ. ಸಂಸದ ತೇಜಸ್ವಿ ಸೂರ್ಯ ಲೋಕಸಭೆಯಲ್ಲಿ ವಾಗ್ದಾಳಿ ಮಾಡಿದ್ದು, ಇದು ನ್ಯಾಯಾಂಗದ ಮೇಲೆ ಇಂಡಿ ಒಕ್ಕೂಟ ಮಾಡುತ್ತಿರುಯವ ದಾಳಿ ಎಂದಿದ್ದಾರೆ. ನ್ಯಾಯಾಧೀಶರನ್ನು ಮೌನವಾಗಿಸುವ ತಂತ್ರ ಎಂದು ಕಟುವಾಗಿ ಟೀಕಿಸಿದ್ದಾರೆ. ಇದೀಗ ಮುರುಗನ್​ ದೇವಸ್ಥಾನ ಹಾಗೂ ಹಜರತ್​ ಅಲಿ ಸೂಫಿ ದರ್ಗಾ ನಡುವೆ ವಿವಾದ ಏರ್ಪಟ್ಟಿದ್ದು, ಮಹಾಭಿಯೋಗ ಏನಾಗುತ್ತದೆ..? ಸುಪ್ರೀಂಕೋರ್ಟ್​ ಹಾಗೂ ತಮಿಳುನಾಡು ಹೈಕೋರ್ಟ್​ ದ್ವಿಸದಸ್ಯ ಪೀಠ ಯಾವ ನಿರ್ಧಾರ ಮಾಡಲಿದೆ ಅನ್ನೋ ಕುತೂಹಲ ಮೂಡಿಸಿದೆ.

Related posts

ಇರಾನ್​ಗೆ ವಾರ್ನಿಂಗ್​ ಮೇಲೆ ವಾರ್ನಿಂಗ್​ ಕೊಡ್ತಿರೋದ್ಯಾಕೆ ಅಮೆರಿಕ..?

Publicspot

Nepal New Leader emerged: ನೇಪಾಳಕ್ಕೆ ನೂತನ ನಾಯಕರು ಯಾರು..? ಏನು ವಿಶೇಷ..?

Publicspot

ಕಾಮದ ಬಲೆಯಲ್ಲಿ ಲಿಂಗಾಯತ ಮೀಸಲಾತಿ ಹೋರಾಟ ಸ್ವಾಮೀಜಿ ಲಾಕ್​..!

Publicspot

PIL rejected by supreme court; ಸುಪ್ರೀಂಕೋರ್ಟ್‌ ಆದೇಶ ಮುಚ್ಚಿಟ್ಟು SIT ರಚನೆ ಮಾಡಿತಾ ಸರ್ಕಾರ..?

Publicspot

ಸುಪ್ರೀಂಕೋರ್ಟ್​ನಲ್ಲಿ PIL ಅರ್ಜಿ ವಜಾ ಮತ್ತು ಮಾಧ್ಯಮಗಳಲ್ಲಿ ಬಂದ ಅಸತ್ಯ..!

Publicspot

Heavy Rain North India: ವರುಣದ ಆರ್ಭಟಕ್ಕೆ ಉತ್ತರ ಭಾರತ ತತ್ತರ..

Publicspot