The Public Spot
Uncategorized

GST Effect; ಇಂದಿನಿಂದ ಬಹುತೇಕ ವಸ್ತುಗಳ ದರ ಇಳಿಕೆ.. ಯಾವ್ಯಾವ ವಸ್ತುಗಳ ಬೆಲೆ ಇಳಿಕೆ ನೋಡಿ..

ಇಂದಿನಿಂದ ಭಾರತದಲ್ಲಿ ಹೊಸ ತೆರಿಗೆ ನೀತಿ ಜಾರಿ ಆಗ್ತಿದೆ. ಬೆಲೆ ಏರಿಕೆ ಬಿಸಿಯಲ್ಲಿದ್ದವರಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಜಿಎಸ್‌ಟಿ ಸುಧಾರಣೆ ಮಾಡುವ ಮೂಲಕ ಬಡವರು, ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗದ ಜನರಿಗೆ ನವರಾತ್ರಿಯ ಬಂಪರ್​ ಗಿಫ್ಟ್​ ಎಂದು ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ. ಇಂದಿನಿಂದ ದೇಶಾದ್ಯಂತ GST 2.0 ಜಾರಿ ಆಗ್ತಿದೆ. ಇನ್ಮುಂದೆ ಶೇಕಡ 5 ಮತ್ತು ಶೇಕಡ 18 ರಷ್ಟು ತೆರಿಗೆ ಮಾತ್ರ ಚಾಲ್ತಿಯಲ್ಲಿ ಇರಲಿದೆ. ನವರಾತ್ರಿ ಹಬ್ಬದ ಆರಂಭದ ದಿನವಾದ ಇಂದಿನಿಂದಲೇ ಜಾರಿ ಆಗುತ್ತಿದೆ. ಈ ಬಗ್ಗೆ ನಿನ್ನೆ ಸಂಜೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜಿಎಸ್​​ಟಿ ಹೊಸ ಅಧ್ಯಾಯ ಶುರುವಾಗಲಿದೆ. ಶೇಕಡಾ 12 ಮತ್ತು 28ರ ತೆರಿಗೆ ಸ್ಲ್ಯಾಬ್​ಗಳನ್ನ ತೆಗೆದುಹಾಕಲಾಗಿದೆ. ಇನ್ಮುಂದೆ ಶೇಕಡಾ 5 ಮತ್ತು 18ರ ತೆರಿಗೆ ಸ್ಲ್ಯಾಬ್​ಗಳು ಮಾತ್ರ ಇರಲಿದ್ದು, ನವರಾತ್ರಿ ದಿನದಿಂದಲೇ ಜಾರಿ ಆಗಲಿವೆ. ಈ ಮೂಲಕ ನವರಾತ್ರಿ ಸಂಭ್ರಮವನ್ನ ದುಪ್ಪಟ್ಟುಗೊಳಿಸುತ್ತಿದ್ದೇವೆ ಎಂದಿದ್ದಾರೆ.

ಆತ್ಮನಿರ್ಭರ್‌ ಭಾರತದಲ್ಲಿ ಉಳಿತಾಯದ ಹಬ್ಬ ಶುರುವಾಗಿದೆ. ದೇಶದಲ್ಲಿ ಸ್ವಾತಂತ್ರ್ಯ ನಂತರ ಅತಿದೊಡ್ಡ ತೆರಿಗೆ ಸುಧಾರಣೆ ಆಗಿದೆ. ಶೇಕಡ 99ರಷ್ಟು ವಸ್ತುಗಳು ಶೇಕಡಾ 5ರ ತೆರಿಗೆ ವ್ಯಾಪ್ತಿಗೆ ಬರಲಿವೆ. ಒಂದು ದೇಶ ಒಂದು ತೆರಿಗೆ ಕನಸು ನನಸಾಗಿದೆ ಅಂತ ಮೋದಿ ಸಂತಸ ವ್ಯಕ್ತಪಡಿಸಿದ್ರು. ದಿನನಿತ್ಯದ ಅಗತ್ಯ ವಸ್ತುಗಳು ಅಗ್ಗವಾಗುತ್ತವೆ. ಆಹಾರ ವಸ್ತುಗಳು, ಔಷಧಿಗಳು, ಸೋಪ್, ಬ್ರಷ್, ಪೇಸ್ಟ್, ಆರೋಗ್ಯ ಮತ್ತು ಜೀವ ವಿಮೆಯಂತಹ ಅನೇಕ ಸರಕುಗಳು ಮತ್ತು ಸೇವೆಗಳು ತೆರಿಗೆ ಮುಕ್ತವಾಗಿರುತ್ತವೆ. ಈ ಹಿಂದೆ ಶೇಕಡ 12 ರಷ್ಟು ತೆರಿಗೆ ವ್ಯಾಪ್ತಿಯಲ್ಲಿದ್ದ ಸರಕುಗಳಲ್ಲಿ ಶೇಕಡ 99ರಷ್ಟು ವಸ್ತುಗಳು, ಇನ್ಮುಂದೆ ಶೇಕಡ 5ರ ತೆರಿಗೆ ವ್ಯಾಪ್ತಿಯಲ್ಲಿ ಬರಲಿವೆ. 2014ರಲ್ಲಿ, ದೇಶವು ನನಗೆ ಪ್ರಧಾನ ಮಂತ್ರಿಯ ಜವಾಬ್ದಾರಿಯನ್ನು ವಹಿಸಿದಾಗ, ವಿದೇಶಿ ಪತ್ರಿಕೆಯಲ್ಲಿ ಒಂದು ಕುತೂಹಲಕಾರಿ ವರದಿ ಪ್ರಕಟವಾಗಿತ್ತು. ನನಗೆ ಚೆನ್ನಾಗಿ ನೆನಪಿದೆ. ಬೆಂಗಳೂರಿನಿಂದ 570 ಕಿ.ಮೀ ದೂರದ ಹೈದರಾಬಾದ್‌ಗೆ ತನ್ನ ಸರಕುಗಳನ್ನು ಕಳುಹಿಸಬೇಕಾದರೆ, ಅದು ತುಂಬಾ ಕಷ್ಟಕರವಾಗಿತ್ತು. ಮೊದಲು ಬೆಂಗಳೂರಿನಿಂದ ಯುರೋಪಿಗೆ ತನ್ನ ಸರಕುಗಳನ್ನು ಕಳುಹಿಸಿ ನಂತರ ಅದೇ ಸರಕುಗಳನ್ನು ಯುರೋಪಿನಿಂದ ಹೈದರಾಬಾದ್‌ಗೆ ಕಳಿಸಬೇಕಿತ್ತು ಅನ್ನೋ ಪರಿಸ್ಥಿತಿ ಇತ್ತು.

ಭಾರತದ ಮೇಲೆ ತೆರಿಗೆ ವಾರ್​ ಮಾಡ್ತಿರೋ ವಿಶ್ವದ ದೊಡ್ಡಣ್ಣನಿಗೆ ಪ್ರಧಾನಿ ಮೋದಿ ತಿರುಗೇಟು ಕೊಟ್ಟಿದ್ದು, ನಮ್ಮ ವಸ್ತುಗಳು ಅಮೆರಿಕದಲ್ಲಿ ಸೇಲ್ ಆಗದಿದ್ರೆ ಏನಂತೆ ನಮ್ಮ ವಸ್ತುಗಳನ್ನ ನಾವೇ ಬಳಸುತ್ತೇವೆ ಅಂತ ಸ್ವದೇಶಿ ವಸ್ತುಗಳನ್ನೇ ಬಳಸುವಂತೆ ದೇಶದ ಜನರಿಗೆ ಮೋದಿ ಕರೆ ಕೊಟ್ಟಿದ್ದಾರೆ. ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ತಲುಪಲು, ನಾವು ಸ್ವಾವಲಂಬನೆಯ ಹಾದಿಯಲ್ಲಿ ನಡೆಯಬೇಕು. ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ದೊಡ್ಡ ಜವಾಬ್ದಾರಿ ನಮ್ಮ MSME ಗಳ ಮೇಲಿದೆ. ದೇಶದ ಸ್ವಾತಂತ್ರ್ಯವು ಸ್ವದೇಶಿ ಮಂತ್ರದಿಂದ ಬಲ ಪಡೆದಿತ್ತು. ಅದೇ ರೀತಿ, ದೇಶದ ಸಮೃದ್ಧಿಗಾಗಿ ಸ್ವದೇಶಿ ವಸ್ತುಗಳನ್ನೇ ಬಳಸಬೇಕಿದೆ ಎಂದಿದ್ದಾರೆ.

ಇಂದಿನಿಂದ ಶಾಂಪೂ, ಟೂತ್‌ ಪೇಸ್ಟ್‌ನಿಂದ ಹಿಡಿದು ಎಲೆಕ್ಟ್ರಾನಿಕ್ಸ್ ವಸ್ತುಗಳು ಮತ್ತು ಆಟೋಮೊಬೈಲ್ಸ್​ವರೆಗೂ ವಸ್ತುಗಳ ಬೆಲೆ ಅಗ್ಗವಾಗಲಿದೆ. ಹಾಲು, ಪನ್ನೀರ್, ಬ್ರೆಡ್‌, ಆರೋಗ್ಯ ವಿಮೆ, ಜೀವ ವಿಮೆ, 33 ಜೀವ ರಕ್ಷಕ ಔಷಧಿಗಳು, ಕ್ಯಾನ್ಸರ್ ಔಷಧಿಗಳು ಶೂನ್ಯ ತೆರಿಗೆ ವ್ಯಾಪ್ತಿಗೆ ಒಳಪಡಲಿವೆ. ಇನ್ನು, ಮ್ಯಾಪ್, ಚಾರ್ಟ್ಸ್, ಗ್ಲೋಬ್, ಪೆನ್ಸಿಲ್, ನೋಟ್‌ ಬುಕ್ಸ್, ಶಾರ್ಪ್‌ನರ್, ಸಾದಾ ಚಪಾತಿ, ಪರೋಟಕ್ಕೆ ಯಾವುದೇ ಜಿಎಸ್​​ಟಿ ಇರಲ್ಲ. ನ್ಯಾಪ್‌ಕಿನ್‌ಗಳು, ಹೊಲಿಗೆ ಯಂತ್ರ, ಟೂತ್‌ಪೇಸ್ಟ್, ಶುಚಿತ್ವ ಉತ್ಪನ್ನಗಳು, ಸಂರಕ್ಷಿತ ತರಕಾರಿ, ಸಿದ್ಧ ಉಡುಪು, ಸಾಬೂನು, ಹೇರ್ ಆಯಿಲ್, ಸಾವಿರ ರೂಪಾಯಿಗಿಂತ ಕಡಿಮೆಯ ಪಾದರಕ್ಷೆಗಳಿಗೆ ಶೇಕಡಾ 5ರಷ್ಟು ಜಿಎಸ್​ಟಿ ವಿಧಿಸಲಾಗುತ್ತದೆ. ಡಯಾಗ್ನೋಸ್ಟಿಕ್​ ಕಿಟ್, ಗ್ಲುಕೋಮೀಟರ್, ಟ್ರ್ಯಾಕ್ಟರ್‌ಗಳು, ಹನಿ ನೀರಾವರಿ ಉಪಕರಣ, ಕೃಷಿ ಉಪಕರಣಗಳ ಖರೀದಿಗೆ ಶೇಕಡಾ 5ರಷ್ಟು ಮಾತ್ರ GST ಇರಲಿದೆ. ಕಾರು, ಬೈಕ್​, ಟಿವಿ, ಎಸಿ ಕೂಡ ಅಗ್ಗವಾಗಿದ್ದು, ಶೇಕಡ 28ರ ತೆರಿಗೆ ವ್ಯಾಪ್ತಿಯಿಂದ ಶೇಕಡ 18ಕ್ಕೆ ಇಳಿಸಲಾಗಿದೆ.

1200 ಸಿಸಿವರೆಗಿನ ಸಣ್ಣ ಕಾರುಗಳು, 350 ಸಿಸಿವರೆಗಿನ ಬೈಕ್​, ಸ್ಕೂಟರ್​​ ಹಾಗೂ ಟಿವಿ, ಎಸಿ, ವಾಷಿಂಗ್ ಮಷಿನ್, ಫ್ರಿಜ್, ಸಿಮೆಂಟ್​ ಮೇಲಿನ ಜಿಎಸ್​ಟಿ ಶೇಕಡಾ 28ರಿಂದ ಶೇಕಡಾ 18ಕ್ಕೆ ಇಳಿಸಲಾಗಿದೆ.. ಕೆಲವು ಐಶಾರಾಮಿ ವಸ್ತುಗಳ ಮೇಲೆ ಶೇಕಡಾ 40 ರಷ್ಟು ತೆರಿಗೆ ವಿಧಿಸಲಾಗ್ತಿದೆ. ತಂಬಾಕು, ಪಾನ್‌ಮಸಾಲಾ, ಬೀಡಿ, ಸಿಗರೇಟ್, ಐಷಾರಾಮಿ ಕಾರುಗಳು, ಜಂಕ್‌ಫುಡ್‌ಗೆ ಶೇಕಡ 40 ರಷ್ಟು ತೆರಿಗೆ ವಿಧಿಸಲಾಗ್ತಿದೆ. ಜಿಎಸ್​ಟಿ ಇಳಿಕೆ ಮಾಡಲಾಗಿದೆ ಎಂದು ಸಾಕಷ್ಟು ಪ್ರಚಾರ ಪಡೆಯಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಯಾವ ಪ್ರಮಾಣದಲ್ಲಿ ಲಾಭ ಸಿಗಲಿದೆ ಅನ್ನೋದನ್ನು ಕಾದು ನೋಡ್ಬೇಕಿದೆ. ಒಟ್ಟಾರೆ ಇಂದಿನಿಂದ ತೆರಿಗೆ ಇಳಿಕೆ ಆಗಿದೆ. ಅದನ್ನು ಗ್ರಾಹಕರಿಗೆ ಕೊಡಬೇಕಿದೆ. ವ್ಯಾಪಾರಿಗಳು, ದೊಡ್ಡ ದೊಡ್ಡ ಕಂಪನಿಗಳು ನುಂಗಿ ನೀರು ಕುಡಿಯದಿದ್ದರೆ ಸಾಕು.

Related posts

ಸುಪ್ರೀಂಕೋರ್ಟ್​ನಲ್ಲಿ ಜಾಮೀನು ರದ್ದಾದ ವೇಳೆ ದರ್ಶನ್​ ಮಾಡಿದ್ದೇನು..?

Publicspot

ಧರ್ಮಸ್ಥಳದಲ್ಲಿ ನೂರಾರು ತಲೆಬುರುಡೆ ಕೇಸ್​.. ಕೋರ್ಟ್​ಗೆ SIT ರಿಪೋರ್ಟ್​

Publicspot

Bollywood; ಗೆಳೆಯನ ಮರಣದ ದಿನವೇ ಉಸಿರು ನಿಲ್ಲಿಸಿದ ಬಾಲಿವುಡ್‌ ನಟ ಧರ್ಮೇಂದ್ರ!!

Publicspot

ಹುಟ್ಟುಹಬ್ಬದ ನೆಪದಲ್ಲಿ ಸಾಕಷ್ಟು ರಹಸ್ಯ ಬಿಚ್ಚಿಟ್ಟ ನಟಿ ರಚಿತಾ ರಾಮ್​!

Publicspot

American Presidents Target India: ಭಾರತವನ್ನು ಟಾರ್ಗೆಟ್​ ಮಾಡಿದ್ಯಾ ಅಮೆರಿಕ..?

Publicspot

BigBoss Kannada; ಈ ಬಾರಿ ಕನ್ನಡಮಯ ಆಗಿದ್ಯಾಕೆ ಬಿಗ್‌ಬಾಸ್‌..?

Publicspot