ರಾಜ್ಯದಲ್ಲಿ ನೂತನ ಸರ್ಕಾರ ರಚನೆಯಾಗಿದೆ. ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಿ, ಡಾ ಜಿ ಪರಮೇಶ್ವರ್ ಉಪಮುಖ್ಯಮಂತ್ರಿ ಆಗಿ, ಉಳಿದ 12 ಜನ ಮಂತ್ರಿಗಳಾಗಿ ಪ್ರಮಾಣ ಸ್ವೀಕಾರ ಮಾಡಿದ್ದಾರೆ. ಇಷ್ಟೇ ಜನರಲ್ಲಿ ಸರ್ಕಾರ ನಡೆಸುವುದು ಕಷ್ಟ ಸಾಧ್ಯ ಆಗಲಿದೆ. ಒಟ್ಟು 34 ಜನರನ್ನು ಮಂತ್ರಿ ಮಂಡಲದಲ್ಲಿ ನೇಮಕ ಮಾಡಿಕೊಳ್ಳಲು ಅವಕಾಶವಿದ್ದು, ಇನ್ನುಳಿದ 20 ಜನರನ್ನು ಯಾವಾಗ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎನ್ನೋ ವಿಚಾರ ಬಹುಚರ್ಚಿತ ವಿಚಾರ. ಅದರಲ್ಲೂ ಸಚಿವ ಸ್ಥಾನ ಆಕಾಂಕ್ಷಿಗಳಿಗೆಲ್ಲಾ ಉಳಿಕೆ ಸಚಿವ ಸ್ಥಾನ ನೀಡಿ ಸಮಾಧಾನ ಮಾಡಲಾಗಿದೆ. ಆದರೆ ವಿಸ್ತರಣೆ ಯಾವಾಗ ಅನ್ನೋದೇ ಪ್ರಶ್ನೆ.

ಈಗ ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟಸಲ್ಲಿ ಇರುವ ನಾಯಕರು ಕೇವಲ 6 ಜಿಲ್ಲೆಗಳನ್ನು ಪ್ರತಿನಿಧಿಸುತ್ತಾರೆ. ಇನ್ನುಳಿದ ಜಿಲ್ಲೆಗಳಿಗೆ ಸಚಿವ ಸ್ಥಾನವೇ ಇಲ್ಲದಂತಾಗಿದೆ. ಇನ್ನು ಒಂದು ವರ್ಷ ಕಳೆದರೆ ಸಚಿವ ಸ್ಥಾನ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿತ್ತದೆ. ಚುನಾವಣಾ ವರ್ಷದಲ್ಲಿ ಚುನಾವಣೆ ಕಡೆಗೆ ಹೆಚ್ಚಿನ ಗಮನ ಕೊಡಲಾಗುತ್ತದೆ. ಸರ್ಕಾರ ಇರುತ್ತದೆ, ಆದರೆ ಎಲ್ಲವನ್ನೂ ಚುನಾವಣಾ ದೃಷ್ಟಿಯಲ್ಲೇ ನೋಡಲಾಗುತ್ತದೆ. ಹೀಗಾಗಿ ಮುಂದಿನ ಕೆಲವೇ ದಿನಗಳಲ್ಲಿ ಸುಮಾರು 15 ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಉಳಿದ 5 ಸ್ಥಾನಗಳನ್ನು ಭರ್ತಿ ಮಾಡದೆ ಸಚಿವರ ಸಮಾಧಾನಕ್ಕೆ ಇರಿಸಿಕೊಳ್ಳಲಾಗುತ್ತದೆ ಎನ್ನುವ ಚರ್ಚೆ ಕಾಂಗ್ರೆಸ್ ಪಾಳಯದಲ್ಲಿ ನಡೆದಿದೆ.

ಮೊದಲ ಕ್ಯಾಬಿನೆಟ್ನಲ್ಲಿ ದಲಿತ ಸಮಾಜಕ್ಕೆ ಮೂರು ಮಂತ್ರಿ ಸ್ಥಾನ ಸಿಕ್ಕಿದ್ದು, ದಲಿತ ಬಲಗೈಗೆ 2, ಎಡಗೈ 1 ಅವಕಾಶ ಸಿಕ್ಕಿದೆ. ಉಳಿದ ಒಂದು ಅಥವಾ ಎರಡು ಸ್ಥಾನಗಳಿಗಾಗಿ ಪ್ರಬಲ ಪೈಪೋಟಿ ಇದ್ದು, ಮಾಜಿ ಹೆಚ್.ಸಿ ಮಹದೇವಪ್ಪ, ಶಾಸಕ ನರೇಂದ್ರ ಸ್ವಾಮಿ, ನಾರಾಯಣಸ್ವಾಮಿ, ಶಾಸಕ ಅಬ್ಬಯ್ಯ ಪ್ರಸಾದ್ ನಡುವೆ ಫೈಟ್ ನಡೆಯುತ್ತಿದೆ. ಹಿರಿಯ ಶಾಸಕ ಅಬ್ಬಯ್ಯ ಪ್ರಸಾದ್ ಮಾಧ್ಯಮಗಳ ಜೊತೆಗೆ ಮಾತನಾಡಿ, ಮೊದಲ ಲಿಸ್ಟ್ನಲ್ಲಿ 14 ಮಂದಿ ಸಚಿವರು ಆಗಿದ್ದಾರೆ. ಜೂನ್ 15ರ ಬಳಿಕ ಎರಡನೇ ಲಿಸ್ಟ್ ಮಾಡುತ್ತಾರೆ. ಆಗಗ ನಮ್ಮ ಭಾಗಕ್ಕೂ ಆದ್ಯತೆ ಸಿಗುತ್ತದೆ, ನನಗೂ ಅವಕಾಶ ಸಿಗುವ ವಿಶ್ವಾಸವಿದೆ ಎಂದಿದ್ದಾರೆ. ಮುಂಬಯಿ ಕರ್ನಾಟಕದಲ್ಲಿ 30 ವರ್ಷಗಳಿಂದ ನಮ್ಮ ಸಮಾಜಕ್ಕೆ ಅವಕಾಶ ಸಿಕ್ಕಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಹುಬ್ಬಳ್ಳಿ ಧಾರವಾಡ ಪ್ರಮುಖವಾದ ಸ್ಥಳ. ಅಲ್ಲಿ ನಾನು ಮೂರು ಬಾರಿ ಆಯ್ಕೆ ಆಗಿದ್ದೇನೆ. ಅಲ್ಲಿ ಅತಿ ಹೆಚ್ಚು ಲೀಡ್ನಲ್ಲಿ ಗೆದ್ದಿರೋದು ಇತಿಹಾಸ ಎಂದಿರುವ ಅಬ್ಬಯ್ಯ ಪ್ರಸಾದ್, ಕೆಲವು ಕಡೆ ಜಿಲ್ಲೆ ಹಾಗೂ ಸಮುದಾಯವಾರು ತೀರ್ಮಾನ ಮಾಡಬೇಕಾಗುತ್ತದೆ. ಸಾಮಾಜಿಕ ನ್ಯಾಯದ ಪರವಾಗಿ ಕಾಂಗ್ರೆಸ್ ತೀರ್ಮಾನ ಮಾಡೋದು. ಹಾಗೇ ನಮ್ಮ ಸಮಾಜಕ್ಕೆ ಇನ್ನೂ ಒಂದು ಮಂತ್ರಿ ಸ್ಥಾನ ಸಿಗುವ ವಿಶ್ವಾಸ ಇದೆ. ಅದು ನನಗೆ ಮಾಡಿಕೊಡ್ತಾರೆಂಬ ಭರವಸೆ ಇದೆ. ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡಿದ ಡಿಕೆಶಿ ರಾಜ್ಯದ ಅತ್ಯುನ್ನತ ಸ್ಥಾನ ಪಡೆದುಕೊಂಡಿದ್ದಾರೆ. ಇದು ಅವರ ಬಹುದಿನಗಳ ಕನಸ್ಸು ನನಸ್ಸಾಗಿದೆ. ಮುಂದೆ ರಾಜ್ಯಕ್ಕೆ ಒಳ್ಳೆಯ ಆಡಳಿತ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿ ಕೆ ಹರಿಪ್ರಸಾದ್ ಅವರು ಬಹಳ ಸೀನಿಯರ್ ಲೀಡರ್ ಇದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ಕಟ್ಟುವಲ್ಲಿ ಅವ್ರು ಕೂಡ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಬಾವುಟವನ್ನು ಮತ್ತೆ ಹಾರಿಸುತ್ತೇವೆ ಎನ್ನುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಕಾಂಗ್ರೆಸ್ನಲ್ಲಿ 2ನೇ ಸಚಿವ ಸಂಪುಟ ವಿಸ್ತರಣೆ ಕಡೆಗೆ ನಾಯಕರ ಚಿತ್ತ ನೆಟ್ಟಿದೆ. ಆದರೆ ಯಾವ ಜಿಲ್ಲೆಗಳಿಗೆ ಮಾನ್ಯತೆ ಸಿಗುತ್ತದೆ. ಯಾವ ಜಾತಿಗೆ ಹೆಚ್ಚಿನ ಮಣೆ ಹಾಕಲಾಗುತ್ತದೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ. ಡಿ.ಕೆ ಶಿವಕುಮಾರ್ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ಕೊಡುವುದು ಒಂದು ಸವಾಲಿನ ಕೆಲಸ ಆಗಿದೆ ಅನ್ನಬಹುದು.


