ತಮಿಳುನಾಡು ಸಿಎಂ ವಿಜಯ್ ಇಂದು ವಿಶ್ವಾಸ ಮತಯಾಚನೆ ಮಾಡಲಿದ್ದಾರೆ. ಈ ಬೆನ್ನಲ್ಲೇ ಮಹತ್ವದ ಬೆಳವಣಿಗೆ ನಡೆದಿದ್ದು, ಸಿಎಂ ಜೋಸೆಫ್ ವಿಜಯ್, AIADMKಯ ರೆಬೆಲ್ ಶಾಸಕರನ್ನ ಭೇಟಿಯಾಗಿದ್ದಾರೆ. ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ವಿರುದ್ಧ ಬಂಡಾಯವೆದ್ದ ಶಾಸಕರ ಗುಂಪು, ವಿಜಯ್‌ಗೆ ಬೆಂಬಲ ಘೋಷಿಸಿದೆ. ಹಿರಿಯ ನಾಯಕರಾದ ಎಸ್‌ಪಿ ವೇಲುಮಣಿ ಮತ್ತು ಸಿ.ವಿ. ಷಣ್ಮುಗಂ ನೇತೃತ್ವದ ಸುಮಾರು 30 ಶಾಸಕರು ಒಟ್ಟಾಗಿದ್ದಾರೆ. ಅಲ್ಲೆದೆ ಸಿ.ವಿ. ಷಣ್ಮುಗಂ ಪಾಳಯದ ಸುಮಾರು 30 ಎಐಎಡಿಎಂಕೆ ಶಾಸಕರು SP ವೇಲುಮಣಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಗುರುತಿಸುವಂತೆ ಕೋರಿ ಸ್ಪೀಕರ್‌ಗೆ ಅರ್ಜಿ ಸಲ್ಲಿಸಿದ್ದಾರೆ..

ಎಐಎಡಿಎಂಕೆಯ ಷಣ್ಮುಗಂ ಬಣ ವಿಜಯ್ ನೇತೃತ್ವದ ಟಿವಿಕೆಗೆ ಬೆಂಬಲ ನೀಡ್ತಿದ್ದಂತೆ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ರೆಬೆಲ್ ಶಾಸಕರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಕೆಲವು ಶಾಸಕರು ನಟ ವಿಜಯ್ ಬಳಿ ಸಚಿವ ಸ್ಥಾನಕ್ಕಾಗಿ ಬೇಡಿಕೊಂಡಿದ್ದಾರೆ. ಅಧಿಕಾರಕ್ಕಾಗಿ ಪಕ್ಷದ ಸಿದ್ಧಾಂತಗಳನ್ನೇ ಬದಿಗೊತ್ತಿದ್ದಾರೆ. ಬಾಲ ಅಲ್ಲಾಡಿಸಲು ಹೋಗಿದ್ದಾರೆ ಎಂದು ಕಿಡಿಕಾರಿದ್ದಾರೆ. ತಮಿಳುನಾಡು ಸಿಎಂ ವಿಜಯ್, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕರನ್ನ ಭೇಟಿ ಮಾಡಿದ್ದಾರೆ. ಚೆನ್ನೈನ IUML ಕಚೇರಿಗೆ ಭೇಟಿ ನೀಡಿದ್ದು, IUML ನಾಯಕರು ಅದ್ಧೂರಿ ಸ್ವಾಗತ ನೀಡಿದ್ದಾರೆ. IUML ನಾಯಕರ ಜೊತೆ ಮಾತುಕತೆ ನಡೆಸಿದ್ದು, ಕಾಂಗ್ರೆಸ್ ಕಚೇರಿಗೂ ತೆರಳಿ ನಾಯಕರನ್ನ ಭೇಟಿಯಾಗಿದ್ದಾರೆ.

ತಮಿಳುನಾಡಿನ ನೂತನ ಸಿಎಂ ಆಗಿ ಆಯ್ಕೆಯಾಗಿರುವ ನಟ ವಿಜಯ್‌ಗೆ ಮದ್ರಾಸ್ ಹೈಕೋರ್ಟ್ ಶಾಕ್ ನೀಡಿದೆ. TVK ಪಕ್ಷದ ಶಾಸಕರೊಬ್ಬರು ವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಭಾಗಿಯಾಗದಂತೆ ತಡೆ ನೀಡಿದೆ. ತಿರುಪತ್ತೂರು ಶಾಸಕ R ಶ್ರೀನಿವಾಸ ಸೇತುಪತಿ ಕೇವಲ ಒಂದು ಮತಗಳಿಂದ ಗೆಲವು ಸಾಧಿಸಿದ್ದರು. ಒಂದು ಮತದ ಅಂತರದಿಂದ ಡಿಎಂಕೆ ಮಾಜಿ ಸಚಿವ KR ಪೆರಿಯಕರುಪ್ಪನ್ ಸೋಲು ಅನುಭವಿಸಿದ್ದು, ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಮಧ್ಯಂತರ ತಡೆ ನೀಡಿದ್ದು, TVK ಶಾಸಕ R ಶ್ರೀನಿವಾಸ ಸೇತುಪತಿ ವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಭಾಗಿಯಾಗದಂತೆ ಆದೇಶ ನೀಡಲಾಗಿದೆ.
ಅಧಿಕಾರ ವಹಿಸಿಕೊಂಡ 2 ದಿನದಲ್ಲೇ ತಮಿಳುನಾಡು ಸಿಎಂ ವಿಜಯ್ ಮಹತ್ವದ ಆದೇಶ ಹೊರಡಿಸಿದ್ದಾರೆ. ಶಾಲಾ-ಕಾಲೇಜು ಬಳಿ ಇರುವ ಮದ್ಯದಂಗಡಿ ಮುಚ್ಚಲು ಆದೇಶ ಹೊರಡಿಸಿದ್ದಾರೆ. ಧಾರ್ಮಿಕ ಸ್ಥಳ, ಶಿಕ್ಷಣ ಸಂಸ್ಥೆ, ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿರುವ ಇರುವ 717 ಸರ್ಕಾರಿ ಸ್ವಾಮ್ಯದ ಮದ್ಯದಂಗಡಿ ಮುಚ್ಚಲು ಆದೇಶ ಹೊರಡಿಸಲಾಗಿದ್ದು, ಅದಕ್ಕಾಗಿ 2 ವಾರಗಳ ಗಡುವು ನೀಡಲಾಗಿದೆ. TASMAC ವತಿಯಿಂದ ನಡೆಸಲ್ಪಡುವ ಮದ್ಯದ ಚಿಲ್ಲರೆ ಮಾರಾಟ ಮಳಿಗಳನ್ನು ಮುಚ್ಚಲು ಆದೇಶಿಸಲಾಗಿದೆ. ಈ ಆದೇಶವನ್ನು ವಿಸಿಕೆ ಸ್ವಾಗತಿಸಿದ್ದು, ಶಾಸಕ ವನ್ನಿಯರಸು ಸಿಎಂ ವಿಜಯ್ ಅವರನ್ನು ಶ್ಲಾಘಿಸಿದ್ದಾರೆ. ಸಚಿವೆ ಸೆಲ್ವಿ ಎಸ್. ಕೀರ್ತನಾ ಮಾತನಾಡಿದ್ದು, ‘ಮಹಿಳೆಯರು ನಿರೀಕ್ಷಿಸಿದ್ದು ಇದನ್ನೇ. ಅಧಿಕಾರ ವಹಿಸಿಕೊಂಡ ಎರಡನೇ ದಿನವೇ ನಾವು ಇದನ್ನು ಜಾರಿಗೆ ತಂದಿದ್ದೇವೆ ಎಂದಿದ್ದಾರೆ.
ತಮಿಳುನಾಡಿನಲ್ಲಿ ಕ್ಷಣ ಕ್ಷಣಕ್ಕೂ ಬೆಳಣಿಗೆಗಳಾಗ್ತಿವೆ. ಮಹತ್ವದ ಬೆಳವಣಿಗೆಯಲ್ಲಿ ತಮಿಳುನಾಡು ಸಿಎಂ ವಿಜಯ್, ತಮ್ಮ ಚುನಾವಣಾ ಗೆಲುವಿನ ಕುರಿತು ಭವಿಷ್ಯ ನುಡಿದಿದ್ದ ಜ್ಯೋತಿಷಿಯನ್ನೇ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕ ಮಾಡಿದ್ದಾರೆ. ರಿಕ್ಕಿ ರಾಧನ್ ವೆಟ್ರಿವೇಲ್ ಎಂಬ ಜ್ಯೋತಿಷಿ, ಟಿವಿಕೆ ಗೆಲ್ಲುತ್ತೆ, ವಿಜಯ್ ಸಿಎಂ ಆಗ್ತಾರೆ ಅಂತ ಒಂದು ವರ್ಷದ ಹಿಂದೆಯೇ ಭವಿಷ್ಯ ನುಡಿದಿದ್ದರಂತೆ. ಹೀಗಾಗಿ ಅವ್ರನ್ನೇ ತಮ್ಮ ರಾಜಕೀಯ ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ ನೇಮಿಸಿಕೊಂಡಿದ್ದಾರೆ. ವಿಜಯ್ ಆ ನಡೆಗೆ ವಿಪಕ್ಷಗಳು ಕಿಡಿಕಾರಿವೆ.
ತಮಿಳುನಾಡು ವಿಧಾನಸಭೆಯಲ್ಲಿ ವಿಪಕ್ಷದ ನಾಯಕ ಹಾಗೂ ಡಿಎಂಕೆ ಶಾಸಕ ಉದಯನಿಧಿ ಸ್ಟಾಲಿನ್ ಮತ್ತೆ ತಮ್ಮ ಸನಾತನ ಧರ್ಮವನ್ನ ಟಾರ್ಗೆಟ್ ಮಾಡಿದ್ದಾರೆ. ವಿಧಾಸಭೆಯಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್, ಜನರನ್ನು ವಿಭಜಿಸುವ ಸನಾತನವನ್ನು ನಿರ್ಮೂಲನೆ ಮಾಡಬೇಕು. ತಮಿಳುನಾಡಿನಿಂದ ಸನಾತನ ಧರ್ಮವನ್ನು ಸಂಪೂರ್ಣ ನಾಶ ಮಾಡಬೇಕು ಎಂದು ಹೇಳಿದ್ದಾರೆ. ಈ ವೇಳೆ ಅವರ ಎದುರಗಡೆ ಆಸನದಲ್ಲಿದ್ದ ಸಿಎಂ ವಿಜಯ್ ಮೌನವಾಗಿ ಕುಳಿತಿದ್ದರು.


