ಕೇಂದ್ರ ಸಚಿವ ಕುಮಾರಸ್ವಾಮಿ ರಾಜ್ಯದಲ್ಲಿ ಸ್ಟಿಂಗ್ ವಿಚಾರವಾಗಿ ಸಮರವನ್ನೇ ಸಾರಿದ್ದಾರೆ. ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಸ್ಟಿಂಗ್ ಮಾಡಲಾಗಿದೆ. ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಹಾಗೂ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಸ್ಟಿಂಗ್ ಮಾಡಿದ್ದು, ವಿಚಾರಣೆಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಸ್ಟಿಂಗ್ ಮೂಲಕ ಸಿದ್ದರಾಮಯ್ಯ ವರ್ಚಸ್ಸನ್ನು ಸಿಎಂ ಡಿ.ಕೆ ಶಿವಕುಮಾರ್ ಹಾಳು ಮಾಡಿದ್ದಾರೆ. ಡಿಕೆ ಶಿವಕುಮಾರ್, ರಾಕೇಶ್ ಶೆಟ್ಟಿ ಮೊಬೈಲ್ ಫೋನ್ ಗಳನ್ನ ತೆಗೆದುಕೊಂಡರೆ ಎಲ್ಲಾ ಸತ್ಯ ಹೊರ ಬರುತ್ತದೆ. ಸಿಎಂಗೆ ವರ್ಚಸ್ಸು ಇಲ್ಲ, ಸಿದ್ದರಾಮಯ್ಯ ವರ್ಚಸ್ಸು ಹಾಳು ಮಾಡಿ ಕಾಂಗ್ರೆಸ್ ಮುಗಿಸಲು ಹೊರಟಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಕುಮಾರಸ್ವಾಮಿ ವಾಗ್ದಾಳಿ ಬೆನ್ನಲ್ಲೇ ಮೈಸೂರಿನಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ತಂದೆಯ ಹೆಸರು ಕೆಡಿಸಲು ಸ್ಟಿಂಗ್ ವಿಚಾರ ಮುನ್ನಲೆಗೆ ತಂದಿದ್ದಾರೆ. ತಂದೆಯನ್ನ ತೇಜೋವಧೆ ಮಾಡಲು, ಬ್ಲಾಕ್ ಮೇಲ್ ಮಾಡಲು ಪ್ರಯತ್ನ ನಡೆದಿದೆ. ಸ್ಟಿಂಗ್ ಪ್ರಕರಣದಲ್ಲಿ ನಮ್ಮ ಪಕ್ಷದವರೇ ಇದ್ದಾರೆ ಎಂದಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಪುತ್ತೂರು ಟಿಕೆಟ್ಗಾಗಿ ಓರ್ವ ಮಹಿಳೆ ಈ ಪ್ರಕರಣದಲ್ಲಿದ್ದಾರೆ. ಆ ಮಹಿಳೆ ನಮ್ಮ ಪಕ್ಷದವರು. ಸ್ಟಿಂಗ್ ಮಾಡಿ ಟಿಕೆಟ್ಗೆ ಬ್ಲಾಕ್ಮೇಲ್ ಮಾಡಲು ಯತ್ನಿಸಿದ್ದಾರೆ. ಸ್ಟಿಂಗ್ ವಿಚಾರದಿಂದ ತಂದೆ ಬೇಜಾರಿಗಿದ್ದಾರೆ. ಕಳಂಕ ಇಲ್ಲದೆ 40 ವರ್ಷದ ರಾಜಕಾರಣ ಮಾಡಿದ್ದಾರೆ. ಸತ್ಯ ನಮ್ಮ ಕಡೆ ಇದೆ. ಸತ್ಯ ಹೊರಗೆ ಬರುತ್ತದೆ ಎಂದಿದ್ದಾರೆ.
ಪತ್ರಕರ್ತ ರಾಕೇಶ್ ಶೆಟ್ಟಿ ಸೇರಿದಂತೆ ಇಬ್ಬರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಕರಣದಲ್ಲಿ ಯಾರೇ ಇದ್ದರೂ ಅರೆಸ್ಟ್ ಮಾಡಲು ತಂದೆ ಹೇಳಿದ್ದಾರೆ. ನಮ್ಮ ಸರ್ಕಾರದ ತನಿಖೆ ಮೇಲೆ ನಂಬಿಕೆ ಇದೆ. ತನಿಖೆ ಸರಿಯಾಗಿ ನಡೆಯುತ್ತಿದೆ. ಅಕಸ್ಮಾತ್ ತನಿಖೆ ಸರಿಯಾಗಿ ನಡೆಲಿಲ್ಲ ಅಂದ್ರೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸುತ್ತೇವೆ ಎಂದು ನೇರವಾಗಿಯೇ ಹೇಳಿದ್ದಾರೆ. ಅತ್ತ ಇನ್ನೊಂದು ಕಡೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಮಾತನಾಡಿದ್ದಾರೆ. ಸುತ್ತೂರು ಮಠಕ್ಕೆ ಭೇಟಿ ನೀಡಿ ಸುಮಾರು 2 ಗಂಟೆಗಳ ಕಾಲ ಮಹತ್ವದ ಚರ್ಚೆ ನಡೆಸಿದ್ದು, ಪ್ರಸ್ತುತ ರಾಜ್ಯ ರಾಜಕಾರಣದ ವಿದ್ಯಮಾನಗಳು ಹಾಗೂ ಸಿಎಂ ಹುದ್ದೆಯ ಪದತ್ಯಾಗದ ಕುರಿತು ಶ್ರೀಗಳಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ಸ್ಟಿಂಗ್ ರಾಜಕಾರಣದ ಕೋಲಾಹಲ ಕುರಿತು ಸುತ್ತೂರು ಶ್ರೀಗಳ ಜೊತೆ ಮಾತುಕತೆಯನ್ನೂ ನಡೆಸಿದ್ದಾರೆ.
ಸುತ್ತೂರು ಶ್ರೀಗಳ ಜೊತೆಗೆ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸ್ಟಿಂಗ್ ಮಾಡಿಸಿದ್ದ ಉದ್ದೇಶ ಸಫಲ ಆಗಲ್ಲ. ನಾನು 8 ವರ್ಷ ಸಿಎಂ ಆಗಿದ್ದೇನೆ. ಅಧಿಕಾರ ಅವಧಿಯಲ್ಲಿ ಈ ಯತ್ನ ಆಗಿಲ್ಲ. ಜನರಿಗೆ ಸತ್ಯ ಗೊತ್ತಾಗಬೇಕು. ಇದು ಸುಳ್ಳು ಆರೋಪ. ಅದಕ್ಕಾಗಿಯೇ ನಾನು ದೂರು ಕೊಟ್ಟಿದ್ದೇನೆ. ಸೆಪ್ಟೆಂಬರ್ನಲ್ಲೇ ನನಗೆ ಸ್ಟಿಂಗ್ ವಿಚಾರ ಗೊತ್ತಾಗಿತ್ತು. ನಾನು ತಪ್ಪೇ ಮಾಡಿಲ್ಲ ಎಂದಿದ್ದಾರೆ. ಇನ್ನು ಕೇಂದ್ರ ಸಚಿವ ಕುಮಾರಸ್ವಾಮಿ ನಿಮ್ಮ ಪರ ವಹಿಸಿದ್ದಾರೆ ಅನ್ನೋ ಮಾತಿಗೆ, ನನ್ನ ಪರ ವಹಿಸೋದಕ್ಕೆ ಯಾರು ಇರುವುದು ಬೇಡ, ಯಾರ ನೈತಿಕ ಬೆಂಬಲವೂ ಬೇಡ. ಒಬ್ಬ ಪತ್ರಕರ್ತ, ಓರ್ವ ಮಹಿಳೆ ಇದರ ಹಿಂದೆ ಇದ್ದಾರೆ. ಸತ್ಯ ಹೊರ ಬರಲಿ ಅಂತ ನಾನೇ ದೂರು ಕೊಟ್ಟಿದ್ದೇನೆ. ಅಪಪ್ರಚಾರ ಆಗಬಾರದು ಅಂತ ಸ್ಟೇ ತಂದಿದ್ದೇನೆ ಅಷ್ಟೆ ಎಂದಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯ ಬಗ್ಗೆ ಮೊದಲ ಬಾರಿಗೆ ಅಸಮಾಧಾನ ಹೊರಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ, ದಸರಾ ಉಸ್ತುವಾರಿಗೆ ಒಂದು ದಿನಕ್ಕೆ ಮೂವರು ಮೇಲುಸ್ತುವಾರಿ ನೇಮಿಸುವ ಅಗತ್ಯ ಇರಲಿಲ್ಲ. ಯಾಕೆ ನೇಮಿಸಿದರು ನನಗೆ ಗೊತ್ತಿಲ್ಲ. ಇದು ನನ್ನ ಸರ್ಕಾರ ಅಲ್ಲ. ಇದು ಬೇರೆ ಸರ್ಕಾರ. ಅದು ಮುಖ್ಯಮಂತ್ರಿಗಳ ನಿರ್ಧಾರ ಎಂದಿದ್ದಾರೆ. ಇನ್ನು ತನಿಖೆ ಸೂಕ್ತ ರೀತಿಯಲ್ಲಿ ನಡೆಯಬೇಕು. ಪಾರದರ್ಶಕ ತನಿಖೆ ನಡೆಯಬೇಕು ಎಂದು ಒತ್ತಿ ಒತ್ತಿ ಹೇಳಿದ್ದಾರೆ. ಅಂದರೆ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಮತ್ತು ಯತೀಂದ್ರ ಸಿದ್ದರಾಮಯ್ಯ ಮೂವರ ಒಂದೇ ವಿಚಾರವನ್ನು ಒತ್ತಿ ಒತ್ತಿ ಹೇಳ್ತಿದ್ದಾರೆ. ಸೂಕ್ತ ತನಿಖೆ ಆಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು. ಒಟ್ಟಾರೆ ಸಚಿವ ಯತೀಂದ್ರ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ.


