ರಾಜ್ಯ ಸರ್ಕಾರದಲ್ಲಿ ಗೃಹ ಖಾತೆ ಹೊಣೆ ಹೊತ್ತಿರುವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆಯಲ್ಲಿ ಶಂಕಿತ ಉಗ್ರನ ಬಂಧನ ಮಾಡಲಾಗಿದೆ. ಪಾಕಿಸ್ತಾನದ ಲಷ್ಕರ್ ಎ ತೊಯ್ಬಾ ಸಂಘಟನೆ ಜೊತೆಗೆ ಸಂಬಂಧ ಹೊಂದಿರುವ ಆರೋಪದ ಮೇರೆಗೆ ಪಶ್ಚಿಮ ಬಂಗಾಳ ಮೂಲದ ಮಮ್ತಾಜ್ ವುಲ್ ಮಲೀಕ್ ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ. ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆ ಸ್ಥಳೀಯ ಪೊಲೀಸರ ಜೊತೆಗೂಡಿ ಕಾರ್ಯಾಚರಣೆ ನಡೆಸಿದೆ. ಬಂಧಿತ ಆರೋಪಿ ಸರಾಫ್ ಬಜಾರ್ನಲ್ಲಿ ಚಿನ್ನಬೆಳ್ಳಿ ಕೆಲಸ ಮಾಡುತ್ತಿದ್ದನು ಎನ್ನಲಾಗಿದೆ. ಜಾಲಾತಣ ಮೂಲಕ ಸಾಕಷ್ಟು ವಿಚಾರಗಳನ್ನು ಉಗ್ರ ಸಂಘಟನೆ ಜೊತೆಗೆ ಹಂಚಿಕೊಂಡಿದ್ದನು ಅನ್ನೋದು ಗೊತ್ತಾಗಿದೆ.

ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ ಮಾತನಾಡಿ, ಕಲಬುರಗಿಯಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದ್ದೇವೆ. ಪಾಕಿಸ್ತಾನ್ ಮೂಲದ ಸೋಷಿಯಲ್ ಮೀಡಿಯಾ ಅಕೌಂಟ್ ಹೊಂದಿದ್ದ ಆರೋಪಿ, LeT ಉಗ್ರ ಸಂಘಟನೆ ಜೊತೆಗೆ ಸಂಪರ್ಕ ಹೊಂದಿರುವುದು ಗೊತ್ತಾಗಿದೆ ಎಂದಿದ್ದಾರೆ. ಇನ್ನು ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪಿ ಬಂಧನ ಪ್ರಕರಣದ ಬಗ್ಗೆ ಚಿಕ್ಕಮಗಳೂರಿನಲ್ಲಿ ಎಂಎಲ್ಸಿ ಸಿ.ಟಿ ರವಿ ಪ್ರತಿಕ್ರಿಯೆ ನೀಡಿದ್ದು, ದೇಶದ ಒಳಗೆ ಬಹಳ ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತುಗಳ ಸರಬರಾಜು ಆಗ್ತಿದೆ. ಬಹಳ ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದಕರ ಸ್ಲೀಪರ್ ಸೆಲ್‌ಗಳು ಹಾಗೂ ಭಯೋತ್ಪಾದಕರಿಗೆ ಬೆಂಬಲಿಸುವಂತಹ ವ್ಯಕ್ತಿಗಳು ಪತ್ತೆಯಾಗುತ್ತಿರುವುದು ಬಹಳ ಗಂಭೀರವಾಗಿ ಆಲೋಚಿಸಬೇಕಾದ ಸಂಗತಿ. ಅದರಲ್ಲೂ ಗೃಹ ಸಚಿವರ ತವರು ಜಿಲ್ಲೆ ಕಲ್ಬುರ್ಗಿಯಲ್ಲಿ ಲಷ್ಕರ್ ಎ ತೋಯ್ಬಾದ ಜೊತೆ ಸಂಪರ್ಕ ಇರುವ ದೇಶದ್ರೋಹಿಗಳು ಇದ್ದಾರೆ ಅಂದರೆ ಲಘುವಾಗಿ ತೆಗೆದುಕೊಳ್ಳುವಂತಿಲ್ಲ ಎಂದಿದ್ದಾರೆ.
ಉಗ್ರಗಾಮಿಗಳ ಜೊತೆ ನಂಟು ಆರೋಪದ ಬಗ್ಗೆ ಕಲ್ಬುರ್ಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಕೇಂದ್ರ ಗುಪ್ತಚರ ಇಲಾಖೆ ಮತ್ತು ನಮ್ಮ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಉಗ್ರಗಾಮಿಗಳ ಜೊತೆ ನಂಟು ಹೊಂದಿದ್ದಾರೆ ಎನ್ನುವ ಮಾಹಿತಿ ಆಧಾರದ ಮೇಲೆ ಇಬ್ಬರನ್ನ ವಶಕ್ಕೆ ಪಡೆದುಕೊಳ್ಳಲಾಗಿತ್ತು. ವಿಚಾರಣಾ ನಂತರ ಒಬ್ಬ ಮಾತ್ರ ಅವರೊಂದಿಗೆ ಸಂಪೂರ್ಣ ಟಚ್ ನಲ್ಲಿ ಇದ್ದ ಎನ್ನುವುದು ಗೊತ್ತಾಗಿದೆ. ಉಗ್ರಗಾಮಿಗಳ ಜೊತೆ ನಂಟು ಹೊಂದಿರುವ ಒಬ್ಬ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ. ಈತ ಪಶ್ಚಿಮ ಬಂಗಾಳದವನು ಎನ್ನುವುದು ಗೊತ್ತಾಗಿದೆ. ನಾವು ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ನಾವು ಭಾರತ ಸರ್ಕಾರದೊಂದಿಗೆ ಕೋ- ಆರ್ಡಿನೇಷನ್ನೊಂದಿಗೆ ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.
ಹೊರ ರಾಜ್ಯದವರು ಬಹಳಷ್ಟು ಜನ ಇಲ್ಲಿಗೆ ಉದ್ಯೋಗಕ್ಕೆ ಆಗಮಿಸುತ್ತಿದ್ದಾರೆ. ಅದು ಅವರ ಹಕ್ಕು. ಅದನ್ನು ತಡೆಯಲು ಆಗಲ್ಲ. ಆದರೆ ಇಲ್ಲಿ ಕೆಲಸ ಮಾಡುವ ಬೇರೆ ರಾಜ್ಯಗಳವರ ಬಗ್ಗೆ ಮಾಹಿತಿ ಕೊಡಬೇಕು ಎಂದು ಹೇಳಿದ್ದೇವೆ. ಯಾರು ಕೊಟ್ಟಿಲ್ಲ. ಹಬ್ಬದ ನಂತರ ಎಲ್ಲಾ ಉದ್ಯಮಿಗಳು, ಇ ಕಾಮರ್ಸ್, ಕಾಫಿ ಅಸೋಸಿಯೇಷನ್, ಹೋಂ ಸ್ಟೇ ಸೇರಿದಂತೆ ಎಲ್ಲರನ್ನ ಕರೆಸಿ ನಿಮ್ಮ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೋಸೆಸ್ ಏನು..? ಎನ್ನುವ ಮಾಹಿತಿ ಪಡೆಯುತ್ತೇವೆ ಎಂದು ಕಲ್ಬುರ್ಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಒಟ್ಟಾರೆ ಬದುಕು ಕಟ್ಟಿಕೊಳ್ಳಲು ಪರರಾಜ್ಯಕ್ಕೆ ಬಂದ ವಲಸಿಗನೊಬ್ಬ ಉಗ್ರ ಸಂಘಟನೆ ಜೊತೆಗೆ ಸಂಬಂಧ ಹೊಂದಿರುವುದು ದುರಂತ.


