ಅಮೆರಿಕ ಹಾಗೂ ಇರಾನ್ ಯುದ್ಧ ಶುರುವಾದ ಬಳಿಕ ಭಾರತ ಅಷ್ಟೆ ಅಲ್ಲ, ಇಡೀ ವಿಶ್ವದಲ್ಲಿ ಎಲ್ಪಿಜಿ ಸಿಲಿಂಡರ್ಗಳ ಸಮಸ್ಯೆ ಶುರುವಾಗಿತ್ತು. ಜನರು ಗ್ಯಾಸ್ಗಾಗಿ ಪರದಾಡುವಂತಾಯ್ತು. ಸಾಕಷ್ಟು ಜನರು ವಿದ್ಯುತ್ ಚಾಲಿತ ಇಂಡಕ್ಷನ್ ಸ್ಟೌ ಖರೀದಿ ಮಾಡುವಂತೆಯೂ ಆಯ್ತು. ಆ ನಂತರ ದಿನಗಳಲ್ಲಿ ಸಿಲಿಂಡರ್ ಸಮಸ್ಯೆ ದೂರ ಆಯ್ತು. ಆದರೂ ಯುದ್ಧ ಸಂಕಷ್ಟ ಸಮಯದಲ್ಲಿ ಹೊಸ ಕನೆಕ್ಷನ್ ರದ್ದು ಮಾಡಲಾಗಿತ್ತು. ಈಗಲೂ ಹೊಸ ಕನೆಕ್ಷನ್ ಸಿಗದೆ ಜನರು ಪರದಾಟ ನಡೆಸುತ್ತಲೇ ಇದ್ದಾರೆ.
ಹೊಸ ಗ್ಯಾಸ್ ಸಂಪರ್ಕ ವಿಚಾರವಾಗಿ ಕೇಂದ್ರಕ್ಕೆ ಕರ್ನಾಟಕದಿಂದ ಪತ್ರ ಬರೆಯಲಾಗಿದೆ. ಆಹಾರ ಸಚಿವ ರಿಜ್ವಾನ್ ಅರ್ಷದ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಹೊಸ ಕನೆಕ್ಷನ್ ಕೊಡುವುದಕ್ಕೆ ಆರಂಭ ಮಾಡುವಂತೆ ಮನವಿ ಮಾಡಿದ್ದಾರೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿಗೆ ಪತ್ರ ಬರೆದಿದ್ದು, ಕರ್ನಾಟಕದಲ್ಲಿ ಜನಸಂಖ್ಯೆ ಮತ್ತು ನಗರ ಪ್ರದೇಶಗಳು ವೇಗವಾಗಿ ಬೆಳೆಯುತ್ತಿವೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡವರು, ಕೂಲಿ ಕಾರ್ಮಿಕರು ಗ್ಯಾಸ್ ಸಂಪರ್ಕ ಸಿಗದೆ ಪರದಾಡುತ್ತಿದ್ದಾರೆ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
ಪ್ರತಿದಿನ ಹೊಸ ಕುಟುಂಬಗಳು ಸೃಷ್ಟಿ ಆಗುತ್ತಲೇ ಇರುತ್ತವೆ. ಹೊಸ ಕುಟುಂಬಗಳಿಗೆ ಸಂಸಾರ ಕಟ್ಟಿಕೊಳ್ಳಲು ಬಂದವರಿಗೆ ಅಡುಗೆ ಗ್ಯಾಸ್ (LPG) ಅತ್ಯಂತ ಅಗತ್ಯವಾದ ವಸ್ತು. ಜಾಗತಿಕ ಎಲ್ಪಿಜಿ ಬಿಕ್ಕಟ್ಟಿನ ನಂತರ, ಕಳೆದ ಕೆಲವು ತಿಂಗಳುಗಳಿಂದ ಹೊಸ ಗ್ಯಾಸ್ ಸಂಪರ್ಕಗಳನ್ನು ನೀಡುವ ಪ್ರಕ್ರಿಯೆ ಸ್ಥಗಿತಗೊಂಡಿದೆ. ಸೌದೆ ಹೊಗೆಯಿಂದ ಮಹಿಳೆಯರು, ಮಕ್ಕಳು ಮತ್ತು ಹಿರಿಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಬೆಂಗಳೂರಿನ ಐಟಿ-ಬಿಟಿ ಉದ್ಯೋಗಿಗಳು, ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಹೊಸ ಗ್ಯಾಸ್ ಕನೆಕ್ಷನ್ ಸಿಗುತ್ತಿಲ್ಲ. ಆಗಸ್ಟ್ 2026ರ ಹೊತ್ತಿಗೆ ಸುಮಾರು 36,000 ಅರ್ಜಿಗಳು ಬಂದಿದ್ದವು. ಹೊಸ ಗ್ಯಾಸ್ ಸಂಪರ್ಕಕ್ಕಾಗಿ ಬಂದ ಅರ್ಜಿಗಳು ಬಾಕಿ ಉಳಿದಿವೆ. ಕರ್ನಾಟಕದ ಅರ್ಹ ಕುಟುಂಬಗಳಿಗೆ ಆದ್ಯತೆಯ ಮೇರೆಗೆ ಹೊಸ ಗ್ಯಾಸ್ (LPG) ಸಂಪರ್ಕಗಳನ್ನು ನೀಡುವಂತೆ ತೈಲ ಮಾರಾಟ ಕಂಪನಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ರಿಜ್ವಾನ್ ಅರ್ಷದ್ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಇದೀಗ ಕೇಂದ್ರ ಸಚಿವರು ಯಾವ ಪ್ರತಿಕ್ರಿಯೆ ನೀಡ್ತಾರೆ ಅನ್ನೋದನ್ನು ಕಾದು ನೋಡಬೇಕು.


